ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು. ಮಕ್ಕಳಿಗೆ ನೀಡುವ ವಿದ್ಯಾಭ್ಯಾಸ ಸರಿಯಾಗಿದ್ದರೆ ಮಾತ್ರ ಮುಂದೆ ಅವರು ಒಳ್ಳೆಯ ಪ್ರಜೆಗಳಾಗುವುದು. ವಿದ್ಯಾಭ್ಯಾಸ ಸರಿಯಾಗಿಲ್ಲದಿದ್ದರೆ ಅವರುಗಳು ಹೇಗೆತಾನೆ ಬುದ್ಧಿವಂತರಾಗಲು ಸಾಧ್ಯ. ಸಮಾಜದಲ್ಲಾಗುತ್ತಿರುವ ಅನ್ಯಾಯಗಳನ್ನು ನೋಡಿ ಅದರಲ್ಲಿ ಬೆಂದು ಬಳಲಿದವರು ಮುಂದೆ ಒಳ್ಳೆಯ ಪ್ರಜೆಗಳಾಗುವರೇ? ಸರ್ಕಾರಿ ಶಾಲೆಗಳಲ್ಲಿ ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿದ್ದರೂ ಸಹ ಇನ್ನೂ ಸಾಕಷ್ಟು ವಿದ್ಯಾರ್ಥಿಗಳು ಸರ್ಕಾರಿ ಶಾಲೆಯ ಮೇಲೆ ಅವಲಂಬಿತವಾಗಿದ್ದಾರೆ. ಈ ರೀತಿ ಸರ್ಕಾರಿ ಶಾಲೆಗಳನ್ನು ನಂಬಿಕೊಂಡಿರುವ ವಿದ್ಯಾರ್ಥಿಗಳಿಗೆ ಸರಿಯಾದ ರೀತಿಯಲ್ಲಿ ವಿದ್ಯಾಭ್ಯಾಸ ನೀಡದಿದ್ದರೆ ಅವರ ಮುಂದಿನ ಪರಿಸ್ಥಿತಿಯೇನು? ಹಲವು ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿದ್ದರೆ ಶಿಕ್ಷಕರು ಇರುವುದಿಲ್ಲ. ಒಂದು ವೇಳೆ ಶಿಕ್ಷಕರಿದ್ದರೆ ಮಕ್ಕಳು ಹೆಚ್ಚಿನ ಪ್ರಮಾಣದಲ್ಲಿ ಇರುವುದಿಲ್ಲ. ಶಿಕ್ಷಕರು ಹಾಗೂ ಮಕ್ಕಳು ಇಬ್ಬರು ಇರುವಂತಹ ಸ್ಥಳಗಳಲ್ಲಿ ಶಾಲೆಯ ಇರುವುದಿಲ್ಲ. ಈ ರೀತಿ ಶಾಲೆಯೇ ಇಲ್ಲದಿರುವಂತಹ ಸ್ಥಳದ ಬಗ್ಗೆ ಹಾಗೂ ಅಲ್ಲಿನ ಮಕ್ಕಳ ಮತ್ತು ಶಿಕ್ಷಕರ ಪರಿಸ್ಥಿತಿಯ ಬಗ್ಗೆ ಹೇಳುತ್ತೇವೆ ಮುಂದೆ ಓದಿ.
ಶಾಲೆಯ ಜಾಗವಿದೆ ಆದರೆ ಶಾಲೆ ಇಲ್ಲ!
ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಬಂಗವಾದಿ ಗ್ರಾಮದಲ್ಲಿ ಇರುವಂತಹ ಸರ್ಕಾರಿ ಶಾಲೆಯು ಸಂಪೂರ್ಣ ಶಿಥಿಲಗೊಂಡಿದ್ದು ಶಾಲೆಯ ರೂಪವನ್ನೇ ಕಳೆದುಕೊಂಡಿದೆ. ಮೂರು ಎಕರೆಯಷ್ಟು ಸರ್ಕಾರಿ ಶಾಲೆಯ ಜಾಗವಿದ್ದರೂ ಸಹ ಆ ಸ್ಥಳದಲ್ಲಿ ಯಾವುದೇ ರೀತಿಯ ಹೊಸ ಶಾಲೆಯನ್ನು ನಿರ್ಮಾಣ ಮಾಡಲು ಅಧಿಕಾರಿಗಳು ಮುಂದಾಗುತ್ತಿಲ್ಲ. ಈಗಿರುವಂತಹ ಕಟ್ಟಡಗಳಲ್ಲಿ ವಿದ್ಯಾಭ್ಯಾಸ ಮಾಡಲು ಸಾಧ್ಯವಾಗದೆ ಶಿಕ್ಷಕರು ವಿದ್ಯಾರ್ಥಿಗಳನ್ನು ಮರದ ಕೆಳಗೆ ಕೂರಿಸಿ ವಿದ್ಯಾಭ್ಯಾಸ ಮಾಡಿಸುತ್ತಿದ್ದಾರೆ. ಮಕ್ಕಳಿಗೆ ಸರಿಯಾದ ರೀತಿಯ ಶಾಲಾ ಕಟ್ಟಡಗಳನ್ನು ಒದಗಿಸಿ ವಿದ್ಯಾಭ್ಯಾಸ ನೀಡಲು ಆಗದಿದ್ದ ಮೇಲೆ ನಮ್ಮ ರಾಜ್ಯ ಅಥವಾ ದೇಶ ಎಷ್ಟು ಮುಂದುವರೆದರೇನು ಪ್ರಯೋಜನ. ಇಲ್ಲಿನ ಮಕ್ಕಳ ಸಮಸ್ಯೆ ಇಂದು ನಿನ್ನೆಯದಲ್ಲ ಸುಮಾರು ವರ್ಷಗಳಿಂದ ಇದು ಹೀಗೆಯೇ ನಡೆದುಕೊಂಡು ಬಂದಿದೆ. ಹಲವು ಭಾಗಗಳಲ್ಲಿ ಶಾಲೆ ಸರಿಯಾಗಿ ಇಲ್ಲದಿರುವಂತಹ ಸಂದರ್ಭದಲ್ಲಿ ಗ್ರಾಮಸ್ಥರು ಮುಂದೆ ನಿಂತು ಶಾಲೆಯನ್ನು ಸರಿಪಡಿಸುವ ಆಲೋಚನೆ ಮಾಡುತ್ತಾರೆ. ಆದರೆ ಇಲ್ಲಿನ ಗ್ರಾಮಸ್ಥರುಗಳು ಶಾಲೆಯ ಆವರಣವನ್ನು ಕಸದ ಗುಂಡಿಯನ್ನು ಆಗಿ ಮಾಡಿಕೊಂಡಿದ್ದಾರೆ ಹಾಗೂ ಇನ್ನು ಕೆಲ ಕದೀಮರುಗಳು ಶಾಲೆಯ ಮೈದಾನವನ್ನೇ ನುಂಗಿ ಹಾಕಲು ಪ್ರಯತ್ನಿಸುತ್ತಿದ್ದಾರೆ. ಎತ್ತು ಏರಿಗೆಳೆದರೆ ಕೋಣ ನೀರಿಗೆಳೆಯಿತು ಎಂಬಂತೆ ಅಧಿಕಾರಿಗಳು ನಿದ್ದೆ ಮಾಡುತ್ತಿದ್ದಾರೆ ಗ್ರಾಮದ ಕೆಲ ಕದೀಮರುಗಳು ಶಾಲೆಯ ಜಾಗವನ್ನೇ ನುಂಗಲು ಪ್ರಯತ್ನಿಸುತ್ತಿದ್ದಾರೆ.
ಎರಡು-ಮೂರು ದಿನಗಳಲ್ಲಿ ಇಷ್ಟೆಲ್ಲಾ ಆಗಲು ಸಾಧ್ಯವಿಲ್ಲ ಇದು ಹಲವು ವರ್ಷಗಳಿಂದ ನಡೆದುಕೊಂಡು ಬಂದಿರುವುದು ಈ ವಿಚಾರದ ಬಗ್ಗೆ ಗ್ರಾಮದ ಕೆಲ ಜನರು ತಾಲೂಕು ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದು ಮನವಿಯ ಮೇರೆಗೆ ತಾಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿಗಳು ಸರ್ವೆ ಅಧಿಕಾರಿಗಳಿಗೂ ಹಾಗೂ ಗ್ರಾಮಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೂ ಒತ್ತುವರಿಯಾಗಿರುವುದು ಕಂಡು ಬಂದಿರುವಂತಹ ಸರ್ವೆ ನಂಬರ್ ಗಳನ್ನು ಮರು ಸರ್ವೆ ಮಾಡಿ ಬೌಂಡರಿ ಲೈನ್ ಗಳನ್ನು ಹಾಕಿ ನಾಮಫಲಕ ಅಳವಡಿಸುವಂತೆ ಆದೇಶಿಸಿರುತ್ತಾರೆ. ಹಾಗೂ ತಾವು ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ವರದಿ ಸಲ್ಲಿಸಬೇಕೆಂದು ಕೋರಿರುತ್ತಾರೆ. ಈ ಆದೇಶವು ೨೦೧೯ರಲ್ಲಿ ಹೊರಡಿಸಿದ್ದರು ಇಲ್ಲಿಯವರೆಗೂ ಯಾವುದೇ ರೀತಿಯ ಬದಲಾವಣೆಗಳು ಕಂಡಿಲ್ಲ. ಒಂದು ಬಾರಿ ಮಾತ್ರ ಅಲ್ಲದೆ ಗ್ರಾಮಸ್ಥರು ಹಲವು ಬಾರಿ ಇದರ ಬಗ್ಗೆ ಅಧಿಕಾರಿಗಳಿಗೆ ಹಲವು ವರ್ಷಗಳಿಂದ ದೂರು ನೀಡುತ್ತಲೆ ಬಂದಿದ್ದಾರೆ. ಆದರೆ ಅಧಿಕಾರಿಗಳು ಮಾತ್ರ ಕಚೇರಿಯಲ್ಲಿ ಕೂತು ಕೋರುತ್ತಿದ್ದೇನೆ ಆದೇಶಿಸಿದ್ದೇನೆ ಎಂದು ಇಲ್ಲಸಲ್ಲದ ಪತ್ರಗಳನ್ನು ನಾಮಕಾವಸ್ಥೆಗೆ ಬರೆಯುತ್ತ ಕಾಲಹರಣ ಮಾಡುತ್ತಿದ್ದಾರೆ.
೧೯೯೩ರಲ್ಲಿ ಅಂದಿನ ಜಿಲ್ಲಾಧಿಕಾರಿಗಳು ಶಾಲೆಯ ಮಕ್ಕಳಿಗೆ ಜಾಗವಿಲ್ಲ ಎಂಬ ಕಾರಣಕ್ಕಾಗಿ ಸರ್ವೇ ನಂಬರ್ ೨೪೯ರ ಎರಡು ಎಕರೆ ಜಾಗವನ್ನು ಸರ್ಕಾರಿ ಶಾಲಾ ಮಕ್ಕಳ ಆಟದ ಮೈದಾನಕ್ಕೆ ಎಂದು ಮಂಜೂರು ಮಾಡಿರುತ್ತಾರೆ. ಜಿಲ್ಲಾಧಿಕಾರಿಗಳು ಮಕ್ಕಳಿಗೆ ಅನುಕೂಲವಾಗಲೆಂದು ಈ ರೀತಿ ಮಾಡಿದರು ಆದರೆ ಕೆಲ ಗ್ರಾಮದ ಪ್ರಭಾವಿಗಳು ಆ ಜಾಗವನ್ನು ಒತ್ತುವರಿ ಮಾಡಿಕೊಂಡು ಮಕ್ಕಳಿಗೆ ಜಾಗವಿಲ್ಲದಂತೆ ಮಾಡಿದ್ದಾರೆ. ಮಂಜೂರಾಗಿ ೨೯ ರಿಂದ ೩೦ ವರ್ಷಗಳೇ ಕಳೆದರೂ ಸಹ ಒತ್ತುವರಿಯಾಗಿರುವ ಜಾಗವನ್ನು ಬಿಡಿಸಿ ಕೊಡಲು ಅಧಿಕಾರಿಗಳು ವಿಫಲರಾಗಿದ್ದಾರೆ. ಒತ್ತುವರಿ ಮಾಡಿರುವವರು ಪ್ರಬಲವಾಗಿದ್ದರೊ ಇಲ್ಲವೋ ಆದರೆ ಅಧಿಕಾರಿಗಳು ಮಾತ್ರ ಗ್ರಾಮದ ಜನರ ದೃಷ್ಟಿಯಲ್ಲಿ ನಾಲಾಯಕ್ ಗಳಾಗಿದ್ದಾರೆ.
ಒತ್ತುವರಿಯಾಗಿರುವ ವಿಚಾರದ ಬಗ್ಗೆ ಹಾಗೂ ಶಾಲಾ ಕಟ್ಟಡಗಳು ಶಿಥಿಲಗೊಂಡಿರುವ ಬಗ್ಗೆ ೧೭ ವರ್ಷಗಳಿಂದ ಗ್ರಾಮಸ್ಥರು ದೂರು ನೀಡುತ್ತಲೇ ಬಂದಿದ್ದಾರೆ ಆದರೆ ಇಲ್ಲಿಯವರೆಗೂ ಯಾವುದೇ ರೀತಿಯಲ್ಲೂ ಪ್ರಗತಿ ಕಾಣದಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ. ಈ ವಿಚಾರದಲ್ಲಿ ಅಧಿಕಾರಿಗಳ ಬೇಜವಾಬ್ದಾರಿತನ ಎದ್ದುಕಾಣುತ್ತಿದೆ ಹಾಗೂ ಎಷ್ಟೇ ಹೊಸ ಅಧಿಕಾರಿಗಳು ಬಂದರೂ ಸಹ ಇದಕ್ಕೆ ಸೂಕ್ತ ಪರಿಹಾರ ನೀಡುವಲ್ಲಿ ವಿಫಲವಾಗುತ್ತಿದ್ದಾರೆ. ಹಲವು ವರ್ಷಗಳ ಹಿಂದೆ ನ್ಯಾಯಾಲಯವು ಸಹ ಶಾಲೆಯ ಪರವಾಗಿ ತೀರ್ಪನ್ನು ನೀಡಿದೆ. ಆದರೂ ಸಹ ಶಾಲೆಯ ಜಾಗ ಶಾಲೆಗೆ ಸಿಗುತ್ತಿಲ್ಲ ಹೊಸ ಕಟ್ಟಡಗಳು ನಿರ್ಮಾಣವಾಗುತ್ತಿಲ್ಲ. ಮಕ್ಕಳು ಮಾತ್ರ ಮರದ ಕೆಳಗೆ ಕುಳಿತು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ನಮ್ಮ ದೇಶ ಪ್ರಗತಿಯತ್ತ ಸಾಗುತ್ತಿದೆ ಎಂದು ಹಲವರು ಬೊಬ್ಬೆಹೊಡೆಯುತ್ತಾರೆ ಆದರೆ ಒಳಗೆ ಅಡಗಿರುವ ಸತ್ಯ ಬೇರೆನೆ ಇದೆ. ಸರಕಾರಿ ಜಾಗ ಹಾಗೂ ಸರಕಾರಿ ಶಾಲೆಗಳನ್ನು ಕಾಪಾಡಿಕೊಳ್ಳಲು ಸಾಧ್ಯವಾಗದಿರುವಂತಹ ವ್ಯವಸ್ಥೆಯಲ್ಲಿ ಇರಬೇಕಾದಂತಹ ಪರಿಸ್ಥಿತಿ ಬಂದಿದೆ. ಮುಂದಿನ ದಿನಗಳಲ್ಲಾದರೂ ಈ ಶಾಲೆಯ ಮಕ್ಕಳಿಗೆ ಹೊಸ ಕಟ್ಟಡ ಹಾಗೂ ಆಟದ ಮೈದಾನ ಸಿಗುವಂತಾಗಲಿ.
ನಂಜನಗೂಡು: ಬೈಕ್ ಮತ್ತು ಟಿಪ್ಪರ್ ನಡುವೆ ಡಿಕ್ಕಿಯಾಗಿ ಬೈಕ್ ಸವಾರ ಯುವಕನೊಬ್ಬ ಮೃತಪಟ್ಟಿರುವ ಘಟನೆ ನಂಜನಗೂಡು ತಾಲೂಕು ಹುಲ್ಲಹಳ್ಳಿ ಸಮೀಪ…
ನಂಜನಗೂಡು: ಅಪರಿಚಿತ ಕಾರು ಚಾಲಕನ ಅತಿ ವೇಗಕ್ಕೆ ಸಿಲುಕಿದ ಆರು ಜನರ ಪೈಕಿ ಐವರಿಗೆ ಗಂಭೀರ ಗಾಯಗಳಾಗಿದ್ದು, ಓರ್ವ ಮಹಿಳೆ…
ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಯಂಕಂಚಿ ಯಿಂದ ಗೊಲಗೇರಿಗೆ ಹೋಗುವ ಮಾರ್ಗ ಮಧ್ಯದಲ್ಲಿ ರಸ್ತೆ ಅಪಘಾತದಲ್ಲಿ ಗೊಲಗೇರಿ ಗ್ರಾಮದ ಯುವಕ…
ನಂಜನಗೂಡು: ನಗರದಲ್ಲಿ ವಾಸಿಸುವ ನಗರವಾಸಿಗಳಿಗೆ ದುಬಾರಿ ವೆಚ್ಚದ ಕುಡಿಯುವ ನೀರಿನ ಬಿಲ್ಗಳನ್ನು ನೀಡಲಾಗುತ್ತಿದೆ, ಅಲ್ಲದೆ ಅನಧಿಕೃತ ಬಡಾವಣೆಗಳಿಗೆ ಎನ್ಓಸಿ ನೀಡಿ…
ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಭಟ್ಕಳ ಪುರಸಭೆಯ ಮುಖ್ಯಾಧಿಕಾರಿ ನೀಲಕಂಠ ಮೇಸ್ತ ಅವರು 50,000 ಲಂಚ ಸ್ವೀಕರಿಸುತ್ತಿದ್ದ ವೇಳೆ…
ಗೌರಿಬಿದನೂರು ನಗರದ ವಿನಾಯಕ ನಗರದ ವಾಸಿ ಪದ್ಮ ಜೈನ್ (59) ಎಂಬುವವರ 50 ಗ್ರಾಂ ಮಾಂಗಲ್ಯ ಸರವನ್ನು ದ್ವಿಚಕ್ರ ವಾಹನದಲ್ಲಿ…