
ಬೆಳಗಾವಿ: ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ದಂಡಾಪುರ ಕ್ರಾಸ್ ಬಳಿ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರನ್ನು ಅಪಹರಣ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ರಾಜಾಪುರ ಗ್ರಾಮದ ನಿವಾಸಿ ಬಸವರಾಜ್ ತಳವಾರ (48) ಅವರನ್ನು ಅಪಹರಣಕಾರರು ಫೆಬ್ರವರಿ 14ರ ರಾತ್ರಿ ಕಿಡ್ನಾಪ್ ಮಾಡಿದ್ದಾರೆ.
ಅಪಹರಣದ ಬಳಿಕ ಅಪಹರಣಕಾರರು ಅವರ ಕುಟುಂಬಸ್ಥರೊಂದಿಗೆ ಸಂಪರ್ಕಕ್ಕೆ ಬಂದು, ಬಸವರಾಜ್ ಅವರನ್ನು ಬಿಡುಗಡೆ ಮಾಡಲು 5 ಕೋಟಿ ರೂಪಾಯಿ ಹಣ ನೀಡುವಂತೆ ಪೀಡಿಸಿದ್ದಾರೆ. ನಿರ್ದಿಷ್ಟ ಸ್ಥಳಕ್ಕೆ ಹಣ ತರಲು ಸೂಚಿಸಿದರೂ, ಹಣವನ್ನು ಪಡೆಯದೇ, ತಾವು ಬೇರೆ ಸ್ಥಳಕ್ಕೆ ಹೋಗುತ್ತಿರುವುದಾಗಿ ಅಪಹರಣಕಾರರು ತಿಳಿಸಿ ಮತ್ತೊಂದು ಬೆದರಿಕೆ ಹಾಕಿದ್ದಾರೆ.
ಘಟನೆ ಕುರಿತು ಬಸವರಾಜ್ ಕುಟುಂಬಸ್ಥರು ತಡರಾತ್ರಿ ಘಟಪ್ರಭಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ತಕ್ಷಣ ಕ್ರಮ ಕೈಗೊಂಡು, ಫೋನ್ ಲೊಕೇಷನ್ ಆಧರಿಸಿ ಅಪಹರಣಕಾರರ ಜಾಡು ಹಿಡಿಯಲು ತೀವ್ರ ಕಾರ್ಯಾಚರಣೆ ಆರಂಭಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಅಪಹರಣಕಾರರ ತಂಡ ನಿಪ್ಪಾಣಿ ಪ್ರದೇಶದಲ್ಲಿ ಅಡಗಿರುವ ಸಾಧ್ಯತೆಗಳು ವ್ಯಕ್ತವಾಗಿದ್ದು, ಅವರನ್ನು ಪತ್ತೆ ಹಚ್ಚಲು ಪೊಲೀಸರು ಜಾಲ ಬೀಸಿದ್ದಾರೆ.
ಈ ಘಟನೆ ಗಂಭೀರ ತಿರುವು ಪಡೆದುಕೊಂಡಿದ್ದು, ಅಪಹರಣ ಮತ್ತು ಹಣ ವಶಕ್ಕೆ ಸಂಬಂಧಿಸಿದಂತೆ ಅಪಹರಣಕಾರರ ಉದ್ದೇಶ ಹಾಗೂ ಹಿನ್ನೆಲೆ ಪತ್ತೆಹಚ್ಚಲು ತನಿಖೆ ಚುರುಕುಗೊಂಡಿದೆ.