
ಬೆಳಗಾವಿ ಜಿಲ್ಲೆಯಲ್ಲಿ ಮತ್ತೊಂದು ಭಾಷೆಯ ವಿವಾದ ಸ್ಫೋಟಗೊಂಡಿದ್ದು, ಮರಾಠಿ ಭಾಷೆಯಲ್ಲಿ ಟಿಕೆಟ್ ಕೇಳಿದ್ದಕ್ಕೆ ಕನ್ನಡದಲ್ಲಿ ಮಾತನಾಡಲು ಸೂಚಿಸಿದ ಬಸ್ ಕಂಡಕ್ಟರ್ ಮೇಲೆ ಗುಂಪೊಂದು ಹಲ್ಲೆ ನಡೆಸಿದೆ. ಈ ಘಟನೆ ಬೆಳಗಾವಿ ತಾಲೂಕಿನ ಸುಳೇಬಾವಿ – ಬಾಳೇಕುಂದ್ರಿ ಗ್ರಾಮದ ನಡುವೆ ನಡೆದಿದೆ.
ಘಟನೆ ವಿವರ
ಕಳೆದ ರಾತ್ರಿ, ಸರ್ಕಾರಿ ಬಸ್‌ನಲ್ಲಿದ್ದ ಮಹಿಳಾ ಪ್ರಯಾಣಿಕರು ಟಿಕೆಟ್ ಪಡೆಯಲು ಮರಾಠಿಯಲ್ಲಿ ಕೇಳಿದಾಗ, ಬಸ್ ಕಂಡಕ್ಟರ್ ಮಹದೇವ್ ಅವರಿಗೆ, “ನನಗೆ ಮರಾಠಿ ತಿಳಿಯದು, ದಯವಿಟ್ಟು ಕನ್ನಡದಲ್ಲಿ ಹೇಳಿ” ಎಂದು ವಿನಂತಿಸಿದ್ದಾನೆ. ಆದರೆ ಈ ಮಾತು ಆ ಮಹಿಳೆ ಮತ್ತು ಅವರ ಜೊತೆಗಿದ್ದ ಯುವಕನಿಗೆ ಅವಗಣನೆಯಂತೆ ತೋರಿದೆ.
ಈ ಘಟನೆಗೆ ಕೋಪಗೊಂಡ ಯುವಕ, ಅಲ್ಲಿಯೇ ಸಹಪ್ರಯಾಣಿಕರನ್ನು ಕರೆದೊಯ್ದು ಬಸ್ ನಿಲ್ಲಿಸಲು ಒತ್ತಾಯಿಸಿದ್ದಾನೆ. ಹೀಗಾಗಿ ಬಸ್ ನಿಲ್ಲಿಸಿದ ನಂತರ ಗುಂಪೊಂದು ಕಂಡಕ್ಟರ್ ಮೇಲೆ ಹಲ್ಲೆ ನಡೆಸಿದೆ. ಈ ದಾಳಿಯಲ್ಲಿ ಕಂಡಕ್ಟರ್ ಗಂಭೀರವಾಗಿ ಗಾಯಗೊಂಡಿದ್ದು, ತಕ್ಷಣವೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಪೊಲೀಸರು ಜಾಗೃತ
ಕಂಡಕ್ಟರ್ ಮಹದೇವ್ ಅವರು ಈ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಬೆಳಗಾವಿ ಬಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿದ ಡಿಸಿಪಿ ರೋಹನ್ ಜಗದೀಶ್, ಗಾಯಾಳು ಕಂಡಕ್ಟರ್ ಅವರ ಆರೋಗ್ಯದ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.
ಈ ಘಟನೆ ಬೆಳಗಾವಿಯಲ್ಲಿ ಕನ್ನಡ-ಮರಾಠಿ ಭಾಷೆ ವಿವಾದ ಮತ್ತೆ ಮೇಲ್ಮಟ್ಟಕ್ಕೆ ಬಂದಿರುವುದನ್ನು ತೋರಿಸುತ್ತದೆ. ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದು, ಆರೋಪಿಗಳನ್ನು ಪತ್ತೆಹಚ್ಚಲು ಕ್ರಮ ಕೈಗೊಂಡಿದ್ದಾರೆ.