ರೈತರ ಕಷ್ಟ ಕಾರ್ಪಣ್ಯಗಳನ್ನು ಮನಗಂಡು ಆ ದೃಷ್ಟಿಯಿಂದ ಹಾಲಿನ ಬೆಲೆ ಏರಿಕೆ ಮಾಡಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ನಂದಿನ ಹಾಲಿನ ದರ ಏರಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ನಾನು ಮೂಲತಃ ಒಬ್ಬ ರೈತನಾಗಿ ನನಗೆ ಹೈನುಗಾರಿಕೆ ರೈತರ ಕಷ್ಟಗಳು ಅರ್ಥವಾಗುತ್ತಿದೆ.
ಹಾಲಿನ ಬೆಲೆಯನ್ನು ಲೀಟರ್ ಗೆ 5 ರೂಪಾಯಿ ಏರಿಕೆ ಮಾಡಬೇಕೆಂದು ಬೇಡಿಕೆ ಬಂದಿತ್ತು. ಕೊನೆಗೆ ಮುಖ್ಯಮಂತ್ರಿಗಳು ಮಾತುಕತೆ ನಡೆಸಿ 3 ರೂಪಾಯಿ ಏರಿಕೆ ಮಾಡಲು ನಿರ್ಧಾರ ಕೈಗೊಂಡರು. ಈ ಏರಿಕೆ ಹಣ ನಿಜವಾಗಿಯೂ ರೈತರಿಗೆ ತಲುಪಬೇಕು ಎಂದರು. 3 ರೂಪಾಯಿ ಹೆಚ್ಚಳ ಮಾಡಿದರೆ ಯಾರಿಗೂ ಏನೂ ಸಮಸ್ಯೆಯಾಗುವುದಿಲ್ಲ. ಬಿಜೆಪಿಯವರು ರಾಜಕೀಯದ ಹೇಳಿಕೆ ನೀಡುತ್ತಿದ್ದಾರೆ. ಅವರು ಇರೋದೆ ಟೀಕೆ ಮಾಡಲು ಎಂದರು.
ಇಡೀ ದೇಶದಲ್ಲಿ ನಮ್ಮ ರಾಜ್ಯದಲ್ಲಿ ಮಾತ್ರ ರೈತರು ಹಾಲಿಗೆ ಇಷ್ಟೊಂದು ಕಡಿಮೆ ಹಣ ಪಡೆಯುತ್ತಿದ್ದಾರೆ. ಬೇರೆ ರಾಜ್ಯಗಳಲ್ಲಿ ಹಾಲಿಗೆ ಇದಕ್ಕಿಂತ ದರ ಅಧಿಕವಾಗಿದೆ. 3 ರೂಪಾಯಿ ನೇರವಾಗಿ ರೈತರಿಗೆ ಹೋಗುತ್ತದೆ. ರೈತರಿಗೆ ಸಹಾಯ ಮಾಡಬೇಕೆಂಬುದೇ ನಮ್ಮ ಉದ್ದೇಶ ಎಂದರು.