ಮುಂಡಗೋಡ:೬೭ ನೇ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಆಯೋಜಿಸಲಾಗಿದ್ದ ಕೋಟಿ ಕಂಠ ಗಾಯನ ಕಾರ್ಯಕ್ರಮವು ತಾಲೂಕಿನಾದ್ಯಂತ ಅತ್ಯಂತ ಯಶಸ್ವಿಯಾಗಿ ಜರುಗಿತು.ತಾಲೂಕಿನ ಎಲ್ಲಾ ಶಾಲಾ ಕಾಲೇಜುಗಳಲ್ಲಿ ಮತ್ತು ಸರ್ಕಾರಿ ಕಚೇರಿಗಳಲ್ಲಿ ಕನ್ನಡ ಪ್ರೇಮಿಗಳು ಕನ್ನಡ ಕವಿಗಳಿಂದ ರಚಿಸಲ್ಪಟ್ಟ ಹಾಡುಗಳನ್ನು ಹಾಡುವುದರ ಮೂಲಕ ಕೋಟಿಕಂಠ ಗಾಯನ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ತಾಲೂಕಾಡಳಿತ ,ತಾಲೂಕ ಪಂಚಾಯತ್ ಮತ್ತು ಪಟ್ಟಣ ಪಂಚಾಯತ್ ಮುಂಡಗೋಡ ವತಿಯಿಂದ ಕೋಟಿ ಕಂಠ ಗಾಯನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಈ ಕಾರ್ಯಕ್ರಮದಲ್ಲಿ ತಹಸಿಲ್ದಾರ್ ಶಂಕರ್ ಗೌಡಿ ಪ್ರಾಸ್ತಾವಿಕವಾಗಿ ಮಾತನಾಡಿ ಪ್ರತಿಜ್ಞಾವಿಧಿ ಬೋಧಿಸಿದರು.ಕೋಟಿ ಕಂಠ ಗಾಯನ ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಬಿಡುಗಡೆಗೊಳಿಸಿದ ರಾಷ್ಟ್ರಕವಿ ಕುವೆಂಪು ಅವರ ರಚನೆಯ ನಾಡಗೀತೆ ಜಯ್ ಭಾರತ ಜನನಿಯ ತನುಜಾತೆ, ಬಾರಿಸು ಕನ್ನಡ ಡಿಂಡಿಮವ, ಹುಯಿಲಗೋಳ ನಾರಾಯಣರಾಯರು ರಚಿಸಿದ ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು,ಡಾ.ಡಿ ಎಸ್ ಕರ್ಕಿ ಅವರ ರಚನೆಯ ಹಚ್ಚೇವು ಕನ್ನಡದ ದೀಪ, ಚೆನ್ನವೀರ ಕಣವಿ ಅವರ ರಚನೆಯ ವಿಶ್ವ ವಿನೂತನ ವಿದ್ಯಾ ಚೇತನ, ಹಂಸಲೇಖ ಅವರ ರಚನೆಯ ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು ಹಾಡುಗಳನ್ನು ಜ್ಞಾನಪ್ರಜ್ಞಾ ಅಂಧ ಶಾಲೆಯ ಶಿಕ್ಷಕರ ಸಂಗೀತ ವಾದ್ಯಗಳೊಂದಿಗೆ ಹಾಡಲಾಯಿತು.
ಈ ಕಾರ್ಯಕ್ರಮಕ್ಕೆ ಶ್ರೀ ಸುರೇಶ ಹುದ್ಲೂರು, ಶ್ರೀಮತಿ ಮಂಜುಳಾ ಕೂಟೂರು ಅವರು ಮಾರ್ಗದರ್ಶನ ಮಾಡಿದ್ದಾರೆ.ಕಾರ್ಯಕ್ರಮದಲ್ಲಿ
ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಆಯ್ದ ಶಿಕ್ಷಕ ಶಿಕ್ಷಕಿಯರಿಂದ ಹಾಗೂ ವಿವಿಧ ಶಾಲೆಗಳ ವಿದ್ಯಾರ್ಥಿಗಳು,
ವಿದ್ಯಾರ್ಥಿನಿಯರಿಂದ,ವಿವಿಧ ಇಲಾಖೆಯ ಅಧಿಕಾರಿಗಳಿಂದ ಹಾಗೂ ಸಾರ್ವಜನಿಕರಿಂದ ಮತ್ತು ಕನ್ನಡ ಪ್ರೇಮಿಗಳಿಂದ ಹಾಡುಗಳು ಮೊಳಗಿದವು.
ಕಾರ್ಯಕ್ರಮದಲ್ಲಿ ತಹಸೀಲ್ದಾರ ಶಂಕರ್ ಗೌಡಿ,ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಪ್ರವೀಣ್ ಕಟ್ಟಿ,ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿ ಹಿರೇಮಠ, ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ್ ಪಟಗಾರ,ಪಟ್ಟಣ ಪಂಚಾಯಿತಿ ಸದಸ್ಯರಾದ ಅಶೋಕ್ ಛಲವಾದಿ,ಎಸ್ ಡಿ ಮುಡಣ್ಣನವರ, ರಮೇಶ್ ಅಂಬಿಗೇರ್, ಚಿದಾನಂದ ಹರಿಜನ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ವಿವಿಧ ಶಾಲೆಗಳ ಶಿಕ್ಷಕರು,ಸಾರ್ವಜನಿಕರು, ಕನ್ನಡ ಪ್ರೇಮಿಗಳು ಭಾಗವಹಿಸಿದ್ದರು.
ವರದಿ :ಮಂಜುನಾಥ ಹರಿಜನ.