ಕೃಷಿ ಹೊಂಡದಲ್ಲಿ ಮುಳುಗಿ ತಾಯಿ-ಮಗ ಮೃತಪಟ್ಟ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಕೋಳೂರು ಗ್ರಾಮದಲ್ಲಿ ಸಂಭವಿಸಿದೆ. ಕೋಳೂರು ಗ್ರಾಮದ ರೂಪಾ (35) ಹಾಗೂ ಮಗ (Son) ಹೇಮಂತ್ (9) ಮೃತ ದುರ್ದೈವಿಗಳು. ತಾಯಿ, ಅಜ್ಜಿ ಜೊತೆಬಾಲಕ ಕುರಿ ಮೇಯಿಸಲು ಹೋಗಿದ್ದ. ಈ ವೇಳೆ ಬಾಲಕ ಹೇಮಂತ್ ಕೃಷಿ ಹೊಂಡದಲ್ಲಿ ಕೈ, ಕಾಲು ತೊಳೆಯಲು ಹೋದಾಗ ಆಕಸ್ಮಿಕ ಕಾಲು ಜಾರಿ ಬಿದ್ದಿದ್ದಾನೆ.
ಮಗ ಮುಳುಗಿದ್ದನ್ನ ಕಂಡ ತಾಯಿ ಆತನ ರಕ್ಷಣೆಗೆ ಮುಂದಾಗಿದ್ದಾಳೆ. ಈ ವೇಳೆ ತಾಯಿಯೂ ಮಗನ ಜೊತೆ ನೀರಿನಲ್ಲಿ ಮುಳುಗಿದ್ದಾಳೆ. ಅಲ್ಲೇ ಇದ್ದ ಅಜ್ಜಿ ಸಹ ರಕ್ಷಣೆಗೆ ಮುಂದಾಗಿದ್ದು, ಆಕೆಯೂ ಮುಳುಗುತ್ತಿದ್ದಾಗ ಬಾಲಕಿಯೋರ್ವಳು ಆಕೆಗೆ ಡ್ರಿಪ್ ಪೈಪ್ ನೀಡಿ ಪಾರು ಮಾಡಿದ್ದಾಳೆ. ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ ಮೃತದೇಹಗಳನ್ನ ಹೊರತೆಗೆದಿದ್ದಾರೆ. ಸದ್ಯ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತರ ಕಣ್ಣುಗಳನ್ನು ದಾನ ಮಾಡಿ ಸಾವನಲ್ಲೂ ಸಹ ಸಾರ್ಥಕತೆ ಮೆರೆದಿದ್ದಾರೆ.