ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಭಟ್ಕಳ ಪುರಸಭೆಯ ಮುಖ್ಯಾಧಿಕಾರಿ ನೀಲಕಂಠ ಮೇಸ್ತ ಅವರು 50,000 ಲಂಚ ಸ್ವೀಕರಿಸುತ್ತಿದ್ದ ವೇಳೆ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಅಧಿಕಾರಿಗಳ ಕೈಗೆ ಸಿಕ್ಕಿ ಬಿದ್ದಿದ್ದಾರೆ.
ಮೊಹಮ್ಮದ್ ಇದ್ರೀಶ್ ಮೊಹತೇಶಾಮ್ ಎನ್ನುವವರು ಜಿಲ್ಲಾ ಲೋಕಾಯುಕ್ತ ಕಚೇರಿಗೆ ಈ ಬಗ್ಗೆ ದೂರು ನೀಡಿದ್ದರು. ಅದರಂತೆ ಶುಕ್ರವಾರ ಭಟ್ಕಳ ಪುರಸಭೆಗೆ ಭೇಟಿ ನೀಡಿದ ಲೋಕಾಯುಕ್ತ ಎಸ್ ಪಿ ಕುಮಾರ ಚಂದ್ರ್ ನೇತೃತ್ವದ ತಂಡವು ದಾಳಿ ಮಾಡಿದೆ.
ಕಚೇರಿಯ ಕೋಣೆಯೊಳಗೆ ಮುಖ್ಯಾಧಿಕಾರಿ ನೀಲಕಂಠ ಮೇಸ್ತ ಅವರು 50,000 ಹಣವನ್ನು ಪಡೆದುಕೊಂಡು ಅವರ ಕಾರಿನ ಚಾಲಕರ ಕೈಯಲ್ಲಿ ಕೊಟ್ಟು ಹಣವನ್ನು ಕಾರಿನಲ್ಲಿ ಇಡುವಂತೆ ತಿಳಿಸಿದ ನಂತರ ನೇರವಾಗಿ ಕಾರಿನ ಹತ್ತಿರ ಲೋಕಾಯುಕ್ತ ತಂಡವು ದಾಳಿ ಮಾಡಿ ಕಾರಿನ ಚಾಲಕನ ಕೈಯಲ್ಲಿದ್ದ 50,000ಗಳನ್ನು ರೆಡ್ ಹ್ಯಾಂಡ್ ಆಗಿ ಹಿಡಿಯಲಾಗಿದೆ.
ಒಳಚರಂಡಿ ಜೋಡಣೆಗೆ ಒಂದು ಲಕ್ಷ ರೂಪಾಯಿ ಬೇಡಿಕೆ ಇಟ್ಟಿದ್ದು ಅದರಲ್ಲಿ 50,000ಗಳನ್ನು ಮುಂಗಡವಾಗಿ ನೀಡಿದ ನಂತರ ಕಾಮಗಾರಿಯನ್ನು ಆರಂಭಿಸುತ್ತೇನೆ ಎಂದಿದ್ದ ಮುಖ್ಯಾಧಿಕಾರಿಗಳು ಮುಂಗಡ ಹಣವನ್ನು ಪಡೆಯುವ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಲೋಕಾಯುಕ್ತ ಎಸ್ ಪಿ ಕುಮಾರ ಚಂದ್ರ್ ಹಾಗೂ ಪ್ರಭಾರಿ ಲೋಕಾಯುಕ್ತ ಡಿವೈಎಸ್ಪಿ ವಿನಾಯಕ ಬಿಲ್ಲವ ನೇತೃತ್ವದಲ್ಲಿ ಪ್ರಸಾದ್ ಪನ್ನೇಕರ 14 ಜನ ಪಿ ಐ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.