ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (ಬಿಎಂಟಿಸಿ) ಬಸ್ಸಿನಲ್ಲಿ ನಡೆದ ಘಟನೆಯೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ರೋಶಕ್ಕೆ ಗುರಿಯಾಗಿದೆ. ಮುಸ್ಲಿಂ ಕಂಡಕ್ಟರ್‌ ತಲೆ ಮೇಲಿನ ಕ್ಯಾಪ್‌ ತೆಗೆಯುವಂತೆ ಮಹಿಳಾ ಪ್ರಯಾಣಿಕರೊಬ್ಬರು ಬಲವಂತವಾಗಿ ಒತ್ತಾಯಿಸಿದ ಪ್ರಕರಣ ನಡೆದಿದೆ. ಇದು ವಿಡಿಯೊದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿದೆ.
ಈ ಬೆಳವಣಗೆ ನಡುವೆಯೇ, ಘಟನೆಯ ಬಗೆಗಿನ ವೈರಲ್ ಟ್ವೀಟ್‌ಗೆ ಬೆಂಗಳೂರು ನಗರ ಪೊಲೀಸರು ಪ್ರತಿಕ್ರಿಯಿಸಿದ್ದಾರೆ.
ಅಪರಿಚಿತ ಮಹಿಳೆಯು ಒಂದೂವರೆ ನಿಮಿಷದ ಕ್ಲಿಪ್ ಶೂಟ್ ಮಾಡಿದ್ದಾರೆ. ಬಿಎಂಟಿಸಿ ಬಸ್‌ನಲ್ಲಿರುವ ಕಂಡಕ್ಟರ್‌ ಸಮವಸ್ತ್ರದಲ್ಲಿದ್ದಾರೆ. ಸಮವಸ್ತ್ರದಲ್ಲಿ ಇರುವವರು ಟೊಪ್ಪಿಯನ್ನು (ಮುಸ್ಲಿಮರು ತಲೆಗೆ ಹಾಕಿಕೊಳ್ಳುವ ಟೊಪ್ಪಿ) ಧರಿಸಬಹುದೇ ಎಂದು ಕಂಡಕ್ಟರ್‌ಗೆ ಮಹಿಳೆ ಕೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಕಂಡಕ್ಟರ್‌ ಬಹುಶಃ ಕ್ಯಾಪ್‌ ಅನ್ನು ಧರಿಸಬಹುದೆಂದು ಕಂಡಕ್ಟರ್ ಉತ್ತರಿಸಿರುವುದು ವಿಡಿಯೊದಲ್ಲಿ ಕಂಡುಬಂದಿದೆ. ‘ನೀವು ಮನೆಯಲ್ಲಿ ನಿಮ್ಮ ಧರ್ಮವನ್ನು ಆಚರಿಸಿ. ಮಸೀದಿಯೊಳಗೆ ಟೊಪ್ಪಿಯನ್ನು ಹಾಕಿಕೊಳ್ಳಿ. ಸಮವಸ್ತ್ರದಲ್ಲಿರುವಾಗ ನೀವು ಟೊಪ್ಪಿಯನ್ನು ಧರಿಸಬಾರದು’ ಎಂದು ಮಹಿಳೆ ಹೇಳುತ್ತಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಕಂಡಕ್ಟರ್, ‘ನಾನು ಅನೇಕ ವರ್ಷಗಳಿಂದ ಟೊಪ್ಪಿಯನ್ನು ಧರಿಸುತ್ತಿದ್ದೇನೆ ಮೇಡಮ್’ ಎಂದು ಹೇಳುತ್ತಾರೆ. ಸಮವಸ್ತ್ರ ತೊಟ್ಟಕೊಂಡಿರುವಾಗ ಇದನ್ನು ಧರಿಸಬಹುದೇ ಎಂದು ಮಹಿಳೆ ಕೇಳುತ್ತಾರೆ. ಕ್ಯಾಪ್‌ ಅನ್ನು ತೆಗೆಯುವಂತೆ ಮಹಿಳೆ ಒತ್ತಾಯಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಕಂಡಕ್ಟರ್‌ ಈ ವರೆಗೆ ಯಾರೂ ಆಕ್ಷೇಪಿಸಿಲ್ಲ. ಆ ಕಾರಣ ನಾನು ಕ್ಯಾಪ್‌ ಅನ್ನು ಧರಿಸುತ್ತಿದ್ದೇನೆ ಎಂದು ಕಂಡಕ್ಟರ್‌ ಹೇಳುತ್ತಾರೆ. ನಾನು ಈ ಬಗ್ಗೆ ನಮ್ಮ ಅಧಿಕಾರಿಗೆ ತಿಳಿಸುತ್ತೇನೆ. ಅವರು ಹೇಳಿದಂತೆ ಕೇಳುತ್ತೇನೆ ಎಂದು ಕಂಡಕ್ಟರ್‌ ಹೇಳುತ್ತಾರೆ.
ಕಂಡಕ್ಟರ್ ತನ್ನ ಹಸಿರು ಕ್ಯಾಪ್ ಅನ್ನು ತೆಗೆದುಹಾಕಬೇಕು ಎಂದು ಮಹಿಳೆ ಮತ್ತೆ ಒತ್ತಾಯಿಸುತ್ತಾರೆ. ‘ನೀವು ಅದನ್ನು ಮಸೀದಿ ಅಥವಾ ನಿಮ್ಮ ಮನೆಯಲ್ಲಿ ಧರಿಸಿದರೆ ಯಾರೂ ಆಕ್ಷೇಪಿಸುವುದಿಲ್ಲ. ಆದರೆ, ಕೆಲಸದಲ್ಲಿರುವು ಹಾಕಿಕೊಳ್ಳಬಾರದು. ಅದನ್ನು ತೆಗೆಯಿರಿ’ ಎಂದು ಮಹಿಳೆ ಒತ್ತಾಯಿಸುತ್ತಾರೆ. ಆ ನಂತರ ಕಂಡಕ್ಟರ್ ಕ್ಯಾಪ್ ಅನ್ನು ತಲೆಯ ಮೇಲಿಂದ ತೆಗೆಯುವ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದೆ.

error: Content is protected !!