
ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ವೈದ್ಯರ ನಿರ್ಲಕ್ಷ್ಯದ ಪ್ರಕರಣಗಳು ಬೆಳಕಿಗೆ ಬರುತ್ತಿದ್ದು, ಇದರಿಂದ ಅನೇಕರು ತಮ್ಮ ಪ್ರಾಣಕ್ಕೆ ಭಯಪಡುವಂತಾಗಿದೆ. ಸಿಸೇರಿಯನ್ ಶಸ್ತ್ರಚಿಕಿತ್ಸೆಯ ವೇಳೆ ವೈದ್ಯರ ಅಜಾಗರೂಕತೆಯಿಂದ ಶಸ್ತ್ರಚಿಕಿತ್ಸೆಗೆ ಬಳಸಿದ ವಸ್ತುಗಳನ್ನು ರೋಗಿಯ ದೇಹದಲ್ಲೇ ಉಳಿಯುವಂತಹ ಭಯಾನಕ ಘಟನೆಗಳು ಒಂದರ ಬಳಿಕ ಒಂದರಂತೆ ನಡೆದಿವೆ.
ಇತ್ತೀಚಿನ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ. ಆರ್ಯಾಪು ಗ್ರಾಮದ ಬಂಗಾರಡ್ಕ ನಿವಾಸಿ ಶರಣ್ಯ ಲಕ್ಷ್ಮಿ ಹೆರಿಗೆಗಾಗಿ 2024ರ ನವೆಂಬರ್ 27ರಂದು ಆಸ್ಪತ್ರೆಗೆ ದಾಖಲಾಗಿದ್ದರು. ನಾರ್ಮಲ್ ಡೆಲಿವರಿ ಸಾಧ್ಯವಾಗದೆ, ವೈದ್ಯರು ಸಿಸೇರಿಯನ್ ಮಾಡಿ ಹೆರಿಗೆ ನಡೆಸಿದರು.
ಆಪರೇಷನ್ ಯಶಸ್ವಿಯಾಗಿ ಮುಗಿದ ಬಳಿಕ, ಡಿಸೆಂಬರ್ 2ರಂದು ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಯಿತು. ಆದರೆ ಮನೆಗೆ ಮರಳಿದ ಕೆಲ ದಿನಗಳ ನಂತರ, ಶರಣ್ಯ ಲಕ್ಷ್ಮಿ ತೀವ್ರ ಜ್ವರಕ್ಕೆ ಒಳಗಾದರು. ಇದರಿಂದ ಆತಂಕಗೊಂಡ ಅವರ ಕುಟುಂಬಸ್ಥರು ಚಿಕಿತ್ಸೆ ನೀಡಿದ ವೈದ್ಯ ಡಾ. ಅನಿಲ್ ಕುಮಾರ್ ಅವರನ್ನು ಸಂಪರ್ಕಿಸಿದರು. ಆದರೆ ವೈದ್ಯರು ಕೇವಲ ಜ್ವರದ ಔಷಧಿ ನೀಡಿ ನಿರ್ಲಕ್ಷ್ಯ ತೋರಿದರು.
ಜ್ವರ ಮುಂದುವರಿದು, ಶರಣ್ಯ ಲಕ್ಷ್ಮಿ ಎದ್ದು ನಿಲ್ಲಲು ಕೂಡ ಕಷ್ಟ ಅನುಭವಿಸುತ್ತಿದ್ದರು. ಇದರಿಂದ ಬೇರೆ ಆಸ್ಪತ್ರೆಯ ವೈದ್ಯರನ್ನು ಸಂಪರ್ಕಿಸಿದ ಕುಟುಂಬ ಸದಸ್ಯರು, ಅವರ ಸಲಹೆಯ ಮೇರೆಗೆ ಸಿಟಿ ಸ್ಕ್ಯಾನ್ ಮಾಡಿಸಿದರು. ತಕ್ಷಣವೇ ಶಾಕ್ ಆಗುವಂತಹ ವಿಚಾರ ಬೆಳಕಿಗೆ ಬಂದಿದೆ—ಆಪರೇಷನ್ ವೇಳೆ ಬಳಸಿದ ಶಸ್ತ್ರಚಿಕಿತ್ಸಾ ಬಟ್ಟೆ (ಸರ್ಜಿಕಲ್ ಗೋಜ) ಹೊಟ್ಟೆಯೊಳಗಡೆ ಉಳಿದಿತ್ತು!
ಇದೇ ತಿಳಿಯುತ್ತಿದ್ದಂತೆ, ತಕ್ಷಣವೇ ಮತ್ತೊಮ್ಮೆ ಶಸ್ತ್ರಚಿಕಿತ್ಸೆ ಮಾಡಿಸಿ, ಹೊಟ್ಟೆಯೊಳಗಿದ್ದ ಬಟ್ಟೆಯನ್ನು ಹೊರತೆಗೆದುಕೊಳ್ಳಲಾಯಿತು. ಸದ್ಯ, ಶರಣ್ಯ ಲಕ್ಷ್ಮಿಯ ಪತಿ ಗಗನ್ ಈ ಕುರಿತು ಪೊಲೀಸ್ ಠಾಣೆಗೆ ದೂರು ನೀಡಿದ್ದು, ವೈದ್ಯ ಅನಿಲ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಇದು ಮೊದಲು ನಡೆದಂತಹ ಘಟನೆಯಲ್ಲ. ಫೆಬ್ರವರಿ 23ರಂದು ಕಲಬುರ್ಗಿಯ ಜಿಮ್ಸ್ ಆಸ್ಪತ್ರೆಯಲ್ಲಿ ಭಾಗ್ಯಶ್ರೀ ಎಂಬ ಮಹಿಳೆಯಿಗೂ ಹಾಗೂ ಫೆಬ್ರವರಿ 19ರಂದು ಚಿಕ್ಕೋಡಿ ತಾಲೂಕಿನ ಮುಗಳಿ ಗ್ರಾಮದ ಶ್ರುತಿ ರಾಜು ಬಡಿಗೇರ್ ಎಂಬಾಕೆಯಿಗೂ ಇದೇ ರೀತಿ ಶಸ್ತ್ರಚಿಕಿತ್ಸೆ ವೇಳೆ ವೈದ್ಯರು ಬಟ್ಟೆ, ಕಾಟನ್ ಹೊಟ್ಟೆಯೊಳಗೇ ಉಳಿಯುವ ದೋಷ ಮಾಡಿದ್ದರು.
ಇಂತಹ ನಿರ್ಲಕ್ಷ್ಯದಿಂದ ಜನರ ಜೀವಕ್ಕೆ ತೀವ್ರ ಅಪಾಯ ಉಂಟಾಗುತ್ತಿದೆ. ವೈದ್ಯಕೀಯ ಜಾಗೃತಿಯ ಕೊರತೆ, ಪರಿಣಾಮಕಾರಿಯಲ್ಲದ ಮೇಲ್ವಿಚಾರಣೆಯಿಂದ ಈ ರೀತಿಯ ಘಟನೆಗಳು ನಡೆಯುತ್ತಿದ್ದು, ಆರೋಗ್ಯ ಇಲಾಖೆಯಿಂದ ತಕ್ಷಣ ಕಠಿಣ ಕ್ರಮ ಕೈಗೊಳ್ಳುವ ಅಗತ್ಯವಿದೆ.