ಓಲಾ ಹಾಗು ಊಬರ್ ಆಟೋಗಳನ್ನು ಸ್ಥಗಿತಗೊಳಿಸಲಾಗಿದ್ದು, ರಸ್ತೆಗಿಳಿಸಿದ್ರೆ 5 ಸಾವಿರ ದಂಡ ಹಾಕೋದಾಗಿ ಸಾರಿಗೆ ಇಲಾಖೆ ಎಚ್ಚರಿಕೆ ನೀಡಿದೆ.
ಕಳೆದ ಹಲವು ವರ್ಷಗಳಿಂದ ಅನಧಿಕೃತವಾಗಿ ಸೇವೆ ನೀಡ್ತಿದ್ದ ಓಲಾ ಊಬರ್ ಆಟೋಗಳ ಹಗಲು ದರೋಡೆಗೆ ಪ್ರತಿಯೊಬ್ಬರೂ ಹೈರಾಣಾಗಿದ್ದಾರೆ. ಹೀಗಾಗಿ ಕಳೆದ ಕೆಲ ದಿನಗಳಿಂದ ಆಪ್ ಆಧಾರಿತ ಆಟೋಗಳನ್ನು ಬ್ಯಾನ್ ಮಾಡಬೇಕು ಅಂತ ತೀವ್ರ ಪ್ರಮಾಣದ ಹೋರಾಟ ನಡೆದ ಬೆನ್ನಲ್ಲೇ ಓಲಾ ಉಬರ್ ಕಂಪನಿಗಳಿಗೆ ನೊಟೀಸ್ ಕೊಟ್ಟು ಸೂಕ್ತ ಉತ್ತರ ನೀಡುವಂತೆ ಸಾರಿಗೆ ಇಲಾಖೆ ಸೂಚನೆ ನೀಡಿತ್ತು. ಐದು ದಿನಗಳ ಬಳಿಕ ಅಗ್ರಿಗೇಟರ್ಸ್ ಕಂಪೆನಿಗಳು ಉತ್ತರ ಕೊಟ್ಟಿದ್ರೂ ಸಾರಿಗೆ ಇಲಾಖೆ ಕೋರ್ಟ್ ಮೊರೆ ಹೋಗಲು ನಿರ್ಧರಿಸಿತ್ತು. ಆದ್ರೆ ಇಂದು ಓಲಾ ಉಬರ್ ಕಂಪೆನಿಗಳ ಜೊತೆ ಸಾರಿಗೆ ಇಲಾಖೆ ಸಭೆ ನಡೆಸಿ ಮಹತ್ವದ ನಿರ್ಧಾರಕ್ಕೆ ಬಂದಿದೆ. ಸಭೆಯಲ್ಲಿ ಓಲಾ ಉಬರ್ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆಯನ್ನೂ ನೀಡಲಾಯ್ತು. ಸುಮಾರು ಒಂದು ಗಂಟೆಗಳ ಕಾಲ ನಡೆದ ಸಭೆ ಬಳಿಕ ನಾಳೆಯಿಂದ ಆಯಪ್ ಆಧಾರಿತ ಆಟೋಗಳು ರಸ್ತೆಗಿಳಿಯದಂತೆ ಎರಡು ಕಂಪನಿಗಳಿಗೆ ಸೂಚನೆ ನೀಡಲಾಗಿದೆ. ಒಂದೊಮ್ಮೆ ರಸ್ತೆಗಿಳಿದ್ರೆ, ಕಂಪನಿಗೆ ದಂಡ ವಿಧಿಸಲಾಗುತ್ತೆ. ಪದೇ ಪದೇ ಉಲ್ಲಂಘನೆ ಮಾಡಿದ್ರೆ, ಆಯಪ್ ಬ್ಯಾನ್ ಮಾಡಲು ಕೂಡ ಸೈಬರ್ ವಿಭಾಗಕ್ಕೆ ದೂರು ನೀಡಲು ನಿರ್ಧಾರ ಮಾಡಲಾಗಿದೆ.
ಇನ್ನು ಸಾರ್ವಜನಿಕರಿಗೂ ನಾಳೆಯಿಂದ ಓಲಾ, ಉಬರ್ ಆಯಪ್ ನಲ್ಲಿ ಬುಕ್ ಮಾಡಬೇಡಿ ಎಂದು ಸಾರಿಗೆ ಆಯುಕ್ತರು ಮನವಿ ಮಾಡಿದ್ದಾರೆ. ಸಾರ್ವಜನಿಕರು ತಾವೇ ಸ್ವತಃ ನಿರ್ಧಾರಕ್ಕೆ ಬಂದು ಆಪ್ ಬಳಕೆ ಮಾಡ್ಬೇಡಿ. ಒಂದುವೇಳೆ ಓಲಾ ಆಟೋ ಸೇವೆ ಬಗ್ಗೆ ಗೊತ್ತಾದ್ರೆ ಸಾರಿಗೆ ಇಲಾಖೆ ಸಹಾಯವಾಣಿಗೆ ಕರೆ ಮಾಡಿ ದೂರು ನೀಡಬಹುದು. ಸಹಾಯವಾಣಿ 9449863426, 9449863429 ನಂಬರ್ಗೆ ಕರೆ ಮಾಡಿ ದೂರು ಸಲ್ಲಿಸಬಹುದು.