
ಶಿವಮೊಗ್ಗ ಹಾಗೂ ಬೀದರ್ ಜಿಲ್ಲೆಗಳಲ್ಲಿ ನಡೆದ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ವೇಳೆ ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರ ಮತ್ತು ಕಾಕಿದಾರಗಳನ್ನು ಕಿತ್ತು ಹಾಕುವಂತೆ ಅಧಿಕಾರಿಗಳು ಸೂಚಿಸಿದ ಘಟನೆ ಭಾರಿ ವಿವಾದಕ್ಕೆ ಕಾರಣವಾಗಿದೆಯೆ. ಈ ಘಟನೆಯಿಂದ ಬ್ರಾಹ್ಮಣ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.
ಪರೀಕ್ಷಾ ಕೇಂದ್ರಗಳಿಗೆ ಜನಿವಾರ ಧರಿಸಿ ಬಂದ ವಿದ್ಯಾರ್ಥಿಗಳಿಗೆ, ಗಾಯತ್ರಿ ದಾರ ಹಾಗೂ ಕೈಯಲ್ಲಿದ್ದ ಪವಿತ್ರ ಧಾರೆಯನ್ನು ತೆಗೆದು ಹಾಕುವಂತೆ ಕೇಳಲಾಗಿದೆ ಎಂಬುದಾಗಿ ಪೋಷಕರು ಆರೋಪಿಸಿದ್ದಾರೆ. ಈ ವೇಳೆ ಕೆಲವೊಂದು ಕೇಂದ್ರಗಳಲ್ಲಿ ಜನಿವಾರವನ್ನು ಬಲವಂತವಾಗಿ ತೆಗೆದು ಹಾಕಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ.
ಈ ಘಟನೆಗೆ ತೀವ್ರ ಪ್ರತಿಕ್ರಿಯೆ ವ್ಯಕ್ತಪಡಿಸಿರುವ ಬ್ರಾಹ್ಮಣ ಸಂಘಟನೆಗಳು, ಸ್ಥಳಕ್ಕೆ ದೌಡಾಯಿಸಿ ಅಧಿಕಾರಿಗಳ ವಿರುದ್ಧ ಗಂಭೀರ ಆಕ್ರೋಶ ವ್ಯಕ್ತಪಡಿಸಿದ್ದವು. “ಬೇರೆ ಸಮುದಾಯದವರ ಧಾರ್ಮಿಕ ಚಿಹ್ನೆಗಳ ಬಗ್ಗೆ ಇಂಥ ಕ್ರಮ ಕೈಗೊಂಡಿರುವುದಿಲ್ಲ, ಬ್ರಾಹ್ಮಣರ ಬಗ್ಗೆ ಮಾತ್ರ ಈ ತಾರತಮ್ಯ ಏಕೆ?” ಎಂದು ಸಂಘಟನೆಗಳ ಪ್ರತಿನಿಧಿಗಳು ಪ್ರಶ್ನಿಸಿದ್ದಾರೆ.
ಶಿವಮೊಗ್ಗ ಹಾಗೂ ಬೀದರ್‌ನಲ್ಲಿನ ಸಂಘಟನೆಗಳು ಈ ಕುರಿತು ಸ್ಥಳೀಯ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಿಸಿರುವುದಾಗಿ ತಿಳಿದುಬಂದಿದೆ. ಘಟನೆ ಸಂಬಂಧ ಕೆಇಎ (ಕರ್ನಾಟಕ ಪರೀಕ್ಷಾ ಪ್ರಾಧಿಕಾರ) ಅಧಿಕಾರಿಗಳು ಪ್ರತಿಕ್ರಿಯೆ ನೀಡಿದ್ದು, ದೂರುಗಳ ಹಿನ್ನೆಲೆ ವರದಿ ಸಂಗ್ರಹಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.
ಇದೊಂದು ಧಾರ್ಮಿಕ ನಂಬಿಕೆಗಳನ್ನು ತುಳಿಯುವ ಅನಾವಶ್ಯಕ ಕ್ರಮವಾಗಿದ್ದು, ಶಿಕ್ಷಣ ಸಂಸ್ಥೆಗಳಲ್ಲಿ ಸಂವೇದನಾಶೀಲತೆ ಅಗತ್ಯವೆಂಬ ಚರ್ಚೆ ಇದೀಗ ಸಾಮಾಜಿಕ ವಲಯದಲ್ಲಿ ಜೋರಾಗಿದೆ.