
ಪಹಲ್ಗಾಮ್‌ನಲ್ಲಿ ನಡೆದ ಹಿಂದೂ ಯಾತ್ರಿಕರ ಮೇಲಿನ ಭೀಕರ ದಾಳಿ ಹಿನ್ನೆಲೆಯಲ್ಲಿ ಪಾಕಿಸ್ತಾನ ಪ್ರಜೆಗಳ ಕುರಿತು ಕೇಂದ್ರ ಸರ್ಕಾರ ತೀವ್ರ ನಿರ್ಧಾರ ತೆಗೆದುಕೊಂಡಿದ್ದು, 48 ಗಂಟೆಗಳಲ್ಲಿ ದೇಶ ತೊರೆಯುವಂತೆ ಆದೇಶ ನೀಡಲಾಗಿದೆ. ಈ ಆದೇಶದ ಬೆನ್ನಲ್ಲೇ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಪಾಕಿಸ್ತಾನ ಮೂಲದ ಮಹಿಳೆಯರು ವಾಸಿಸುತ್ತಿರುವುದು ಬೆಳಕಿಗೆ ಬಂದಿದೆ.
ಭಟ್ಕಳದಲ್ಲಿ 14 ಪಾಕಿಸ್ತಾನ ಮೂಲದ ಮಹಿಳೆಯರು ದೀರ್ಘಾವಧಿ ವೀಸೆಯಡಿಯಲ್ಲಿ ನೆಲೆಸಿದ್ದಾರೆ. ಈ ಮಹಿಳೆಯರು ಶಾಂತಿಪೂರ್ಣವಾಗಿ ಭಟ್ಕಳದಲ್ಲಿ ತಮ್ಮ ಕುಟುಂಬದೊಂದಿಗೆ ಜೀವನ ಸಾಗಿಸುತ್ತಿದ್ದು, ಕೇಂದ್ರದ ಗಡೀಪಾರು ಆದೇಶ ಇವರಿಗೆ ಅನ್ವಯಿಸುವುದಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಈ ವಿಚಾರ ತಿಳಿದು ಜಿಲ್ಲಾಧಿಕಾರಿ ಎಂ. ನಾರಾಯಣ್ ಭಟ್ಕಳಕ್ಕೆ ಭೇಟಿ ನೀಡಿ, ಸ್ಥಳೀಯ ಪೊಲೀಸರಿಂದ ಮಾಹಿತಿಗಳನ್ನು ಸಂಗ್ರಹಿಸುತ್ತಿದ್ದಾರೆ. ಹೆಚ್ಚಿನ ಪಾಕಿಸ್ತಾನ ಮೂಲದ ಮಹಿಳೆಯರು ಇಲ್ಲಿ ನೆಲೆಸಿರುವ ಸಾಧ್ಯತೆ ಇದ್ದು, ಇನ್ನುಳಿದ ಮಾಹಿತಿಗಳಿಗೂ ತನಿಖೆ ನಡೆಯುತ್ತಿದೆ.
ಇದು ಹೊಸದ್ದಲ್ಲ. ಸ್ವಾತಂತ್ರ್ಯಪೂರ್ವ ಕಾಲದಿಂದಲೇ ಭಟ್ಕಳ ಮತ್ತು ಪಾಕಿಸ್ತಾನ ನಡುವೆ ವೈವಾಹಿಕ ಸಂಬಂಧಗಳ ಸಂಪ್ರದಾಯ ನಡೆಯುತ್ತಿದ್ದು, ಪರಸ್ಪರವಾಗಿ ವರ-ವಧು ವಿನಿಮಯವಾಗುತ್ತಿತ್ತು. ಇದರಿಂದಾಗಿ ಪಾಕಿಸ್ತಾನ ಮೂಲದ ಹಲವಾರು ಮಹಿಳೆಯರು ಭಾರತೀಯ ನಾಗರಿಕರೊಂದಿಗೆ ವಿವಾಹವಾದ ನಂತರ ಭಟ್ಕಳದಲ್ಲಿ ನೆಲೆಸಿದ್ದಾರೆ.
ಈ ನಡುವೆ, ಭಟ್ಕಳದಲ್ಲಿ ವಾಸವಿರುವ ಸುಮಾರು 10 ಪಾಕಿಸ್ತಾನ ಮೂಲದ ಮಹಿಳೆಯರು ಬಹುಕಾಲದಿಂದ ಇಲ್ಲಿ ನೆಲೆಸಿದ್ದು, ಅವರಲ್ಲಿ ನಾಲ್ವರಿಗೆ ಭಾರತದಲ್ಲಿಯೇ ಮಕ್ಕಳು ಹುಟ್ಟಿದ್ದಾರೆ. ಈ ಮಹಿಳೆಯರ ವೀಸಾ ಪ್ರತಿ ಎರಡು ವರ್ಷಕ್ಕೆ ನವೀಕರಿಸಲಾಗುತ್ತಿದ್ದು, ಎಲ್ಲವೂ ಕಾನೂನುಬದ್ಧವಾಗಿದೆ.
ಪ್ರಸ್ತುತ ಭದ್ರತಾ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರೂ, ಭಟ್ಕಳದಲ್ಲಿ ಇರುವ ಪಾಕಿಸ್ತಾನ ಮೂಲದ ಮಹಿಳೆಯರ ವಿಚಾರದಲ್ಲಿ ಎಚ್ಚರಿಕೆಯು ತಾಳಲಾಗುತ್ತಿದೆ. ಎಲ್ಲರ ದಾಖಲೆಗಳನ್ನು ಪರಿಶೀಲಿಸಿ ಕಾನೂನುಬದ್ಧತೆ ನಿರ್ಧರಿಸಲಾಗುತ್ತದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.