ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಟಿ.ಬೇಗೂರು ಗ್ರಾಮದಲ್ಲಿ 20 ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಶೋಭಾರಾಣಿ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ನಡೆದಿದೆ.
ತೊರೆಕೆಂಪೋಹಳ್ಳಿ ಗ್ರಾಮದ ರಮೇಶ್ ತಮ್ಮ ನಿವೇಶನವನ್ನು ಪತ್ನಿ ಹೆಸರಿಗೆ ಖಾತಾ ಬದಲಾಯಿಸಲು ಟಿ.ಬೇಗೂರು ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಸಂಬಂಧ ಖಾತೆ ಬದಲಾಯಿಸಲು ಪಿಡಿಒ ಶೋಭಾರಾಣಿ ಮಧ್ಯವರ್ತಿ ರುದ್ರಪ್ಪ ಮೂಲಕ 20 ಸಾವಿರ ರೂಪಾಯಿ ಲಂಚದ ಬೇಡಿಕೆ ಇಟ್ಟಿದ್ದರಿಂದ ಪ್ರಕರಣ ಬೆಳಕಿಗೆ ಬಂದಿದೆ.
ಲಂಚದ ಹಣವನ್ನು ಹಸ್ತಾಂತರಿಸುವಂತೆ ರುದ್ರಪ್ಪ, ರಮೇಶ್ ಅವರನ್ನು ಗ್ರಾಮ ಪಂಚಾಯಿತಿ ಕಚೇರಿಗೆ ಕರೆಸಿದ್ದರು. ಈ ವೇಳೆ ರಮೇಶ್ ಮೂಲಕ ಲಂಚದ ಹಣ ಪಡೆಯುತ್ತಿದ್ದ ಪಿಡಿಓ ಶೋಭಾರಾಣಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಶೋಭಾರಾಣಿಯನ್ನು ವಶಕ್ಕೆ ಪಡೆದು ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ.
ಗ್ರಾಮಸ್ಥರಲ್ಲಿ ತೀವ್ರ ಚರ್ಚೆ ಹುಟ್ಟುಹಾಕಿದ್ದು, ಲೋಕಾಯುಕ್ತರ ತಕ್ಷಣದ ಕ್ರಮಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.