ವಿಧವೆಯರು, ಅವಿವಾಹಿತ ಮಹಿಳೆಯರಿಗೆ ಆನ್ಲೈನ್ನಲ್ಲಿ ಗಾಳ ಹಾಕಿ ಬೆಣ್ಣೆಯಂತಹ ಮಾತುಗಳಿಂದ ಮರುಳು ಮಾಡಿ, ಮದುವೆಯಾಗಿ ಹಣ ಮತ್ತು ಚಿನ್ನಾಭರಣ ಕದ್ದು ಪರಾರಿಯಾಗುತ್ತಿದ್ದ ಖತರ್ನಾಕ್ ಆಸಾಮಿಯನ್ನು ಮೈಸೂರು ಪೊಲೀಸರು ಕಳೆದ ಭಾನುವಾರ ಬಂಧಿಸಿದ್ದಾರೆ. ಇದೀಗ ಈ ಪ್ರಕರಣದಲ್ಲಿ ಮತ್ತಷ್ಟು ರೋಚಕ ಸಂಗತಿಗಳು ಬಯಲಾಗುತ್ತಿವೆ.
ಮಹೇಶ್ (35) ಬಂಧಿತ ಆರೋಪಿ. ಈತ ಬೆಂಗಳೂರಿನ ಬನಶಂಕರಿ ಬಡಾವಣೆಯ ನಿವಾಸಿ. ಮೈಸೂರಿನ ಕುವೆಂಪುನಗರ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಮಹಾವಂಚಕನನ್ನು ಕಾನೂನಿನ ಬಲೆಗೆ ಬೀಳಿಸಿದ್ದಾರೆ. ಮದುವೆಯಾಗಿ, ಮಕ್ಕಳು ಮಾಡಿ, ನಗ- ನಾಣ್ಯ ದೋಚಿ ನಾಪತ್ತೆಯಾದರೂ ದೂರು ಕೊಡಲು ಮಹಿಳೆಯರು ಹಿಂದೇಟು ಹಾಕಿದ್ದರು. ಕೊನೆಗೂ ಮೈಸೂರಿನ ಓರ್ವ ಸಂತ್ರಸ್ತ ಮಹಿಳೆ ಮುಂದೆ ಬಂದು ದೂರು ನೀಡಿದ ಬಳಿಕ ಮಹೇಶ್ನನ್ನು ಬಂಧಿಸಲಾಗಿದೆ.
ಶೋಕಿ ಜೀವನ ನಡೆಸುತ್ತಿದ್ದ ಮಹೇಶ್, ಆನ್ಲೈನ್ನಲ್ಲಿ ಸಿರಿವಂತ ಮಹಿಳೆಯರಿಗೆ ಗಾಳ ಹಾಕುತ್ತಿದ್ದ. ತನ್ನ ಮರಳು ಮಾತುಗಳಿಂದಲೇ ಪ್ರೀತಿಯ ಬಲೆಗೆ ಬೀಳಿಸಿಕೊಳ್ಳುತ್ತಿದ್ದ. ಬಳಿಕ ಮದುವೆಯಾಗುವ ನಾಟಕವಾಡಿ ವಂಚನೆ ಮಾಡುತ್ತಿದ್ದ. ಮದುವೆ ಆಗಲು ಡೈರೆಕ್ಟರ್ ಸ್ಪೆಷಲ್ ಸಿನಿಮಾ ಮಾದರಿಯನ್ನು ಅನುಸರಿಸುತ್ತಿದ್ದ. 5 ಸಾವಿರ ರೂಪಾಯಿ ಕೊಟ್ಟರೆ ಬಾಡಿಗೆಗೆ ತಂದೆ-ತಾಯಿ, ಬಂಧು ಬಳಗ ಬರುತ್ತಿದ್ದರು. ಈ ಪ್ರಳಯಾಂತಕ ಒಂದೊಂದು ಮದುವೆಗೂ ಒಂದೊಂದು ಬಳಗವನ್ನು ಫಿಕ್ಸ್ ಮಾಡುತ್ತಿದ್ದ.
ವರ್ಷಕ್ಕೆ 20 ಲಕ್ಷ ರೂ. ಸಂಗ್ರಹ. ವಿಚಾರಣೆಗೆ ವೇಳೆ ಒಟ್ಟು 12 ಮದುವೆ ಆಗಿರುವುದಾಗಿ ಹೇಳಿಕೆ ನೀಡಿದ್ದಾನೆ. ಈ ಪೈಕಿ 6 ಮಹಿಳೆಯರಿಗೆ ಮಕ್ಕಳಿದ್ದಾರೆ. ಸುಲಭವಾಗಿ ಹಣ ಗಳಿಸಬಹುದು ಎನ್ನುವ ಕಾರಣಕ್ಕೆ ಮದುವೆಯನ್ನು ಆಯ್ಕೆ ಮಾಡಿಕೊಂಡಿದ್ದ. ಸಿರಿವಂತ ಮಹಿಳೆಯರೇ ಈತನ ಟಾರ್ಗೆಟ್. ವರ್ಷಕ್ಕೆ ಸರಾಸರಿ 20 ಲಕ್ಷ ರೂ. ಹಣ ಸಂಗ್ರಹಿಸುತ್ತಿದ್ದ. ಯಾವುದೇ ಆಸ್ತಿ ಮಾಡಿಲ್ಲ. ವಂಚಿಸಿದ ಹಣವನೆಲ್ಲ ಶೋಕಿಗಾಗಿ ಹಣವನ್ನು ಖರ್ಚು ಮಾಡಿ ಇದೀಗ ಜೈಲು ಪಾಲಾಗಿದ್ದಾನೆ.
ಮಹೇಶ್ ಸಿಕ್ಕಿಬಿದ್ದಿದ್ಹೇಗೆ?
ಆರೋಪಿ ಮಹೇಶ್ಗೆ ಶಾದಿ ಡಾಟ್ ಕಂನಲ್ಲಿ ಮೈಸೂರಿನ ನಿವಾಸಿ ಹೇಮಲತಾ ಎಂಬುವರು ಪರಿಚಯವಾಗಿದ್ದರು. ತಾನೊಬ್ಬ ಡಾಕ್ಟರ್ ಎಂದು ಸುಳ್ಳು ಹೇಳಿ, ಆಕೆಯನ್ನು ನಂಬಿಸಿ, ಆಂಧ್ರ ಪ್ರದೇಶದ ವಿಶಾಖಪಟ್ಟಣದಲ್ಲಿ ಮದುವೆಯಾಗಿದ್ದ. ಇದಾದ ಬಳಿಕ ತನ್ನ ವರಸೆ ಶುರು ಮಾಡಿದ್ದ. ತಾನೊಂದು ಕ್ಲಿನಿಕ್ ತೆರೆಯಬೇಕೆಂದು ಅಂದುಕೊಂಡಿದ್ದೇನೆ. ಇದಕ್ಕಾಗಿ 70 ಲಕ್ಷ ರೂ. ಬೇಕಿದ್ದು, ಸಾಲ ಕೊಡಿಸು ಎಂದು ಹೇಮಲತಾಳನ್ನು ಒತ್ತಾಯಿಸುತ್ತಿದ್ದ. ಆದರೆ, ಸಾಲ ಕೊಡಿಸಲು ಹೇಮಲತಾ ಹಿಂದೇಟು ಹಾಕಿದರು. ಈಕೆ ತನ್ನ ದಾರಿಗೆ ಬರುತ್ತಿಲ್ಲ ಅಂತ ತಿಳಿದ ಬಳಿಕ ಆಕೆಯನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ, 15 ಲಕ್ಷ ರೂ. ಹಣ ಹಾಗೂ ಚಿನ್ನಾಭರಣವನ್ನು ಕದ್ದು ಮಹೇಶ್ ಪರಾರಿಯಾಗಿದ್ದ. ಇದಾದ ಬಳಿಕ ಹೇಮಲತಾ ಕುವೆಂಪುನಗರ ಪೊಲೀಸರಿಗೆ ದೂರು ನೀಡಿದ್ದರು.
ದೂರು ದಾಖಲಿಸಿಕೊಂಡ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ, ಆರೋಪಿ ಮಹೇಶನ ಎಡೆಮುರಿಯನ್ನು ಕಟ್ಟಿದ್ದಾರೆ. ಬಳಿಕ ವಿಚಾರಣೆ ವೇಳೆ ಈತ ತಾನು ಡಾಕ್ಟರ್, ಇಂಜಿನಿಯರ್, ಸಿವಿಲ್ ಕಂಟ್ರಾಕ್ಟರ್ ಹೀಗೆ ಹಲವು ಪ್ರತಿಷ್ಠಿತ ಸ್ಥಾನಗಳ ಹೆಸರಲ್ಲಿ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ. ಈತ ವಿಧವೆ ಮತ್ತು ಅವಿವಾಹಿತ ಮಹಿಳೆಯರನ್ನೇ ಟಾರ್ಗೆಟ್ ಮಾಡುತ್ತಿದ್ದ. ಅವರೆಲ್ಲರಿಗೂ ಕೈಕೊಟ್ಟಿರುವ ಸಂಗತಿ ಬಯಲಾಗಿದೆ.
ಬಂಧಿತ ಮಹೇಶ್ನಿಂದ 2 ಲಕ್ಷ ನಗದು, 2 ಕಾರು, ಒಂದು ಬ್ರೇಸ್ಲೆಟ್, ಒಂದು ಉಂಗುರ, ಎರಡು ಚಿನ್ನದ ಬಳೆ, ಒಂದು ನೆಕ್ಲೆಸ್ ಹಾಗೂ 7 ಮೊಬೈಲ್ಗಳನ್ನ ವಶಕ್ಕೆ ಪಡೆಯಲಾಗಿದೆ.