ಯುವತಿ ಮತ್ತು ಆಕೆಯ ತಾಯಿ ಇಬ್ಬರೊಂದಿಗೂ ಸಂಬಂಧ ಹೊಂದಿದ್ದ 21 ವರ್ಷದ ಯುವಕನನ್ನು ಬರ್ಬರವಾಗಿ ಕೊಲೆ ಮಾಡಿ, ಮೃತದೇಹ ನಿರ್ಜನ ಪ್ರದೇಶದಲ್ಲಿ ಎಸೆದಿರುವ ಘಟನೆ ಪಶ್ಚಿಮ ಬಂಗಾಳದ ಪರಗಣ ಜಿಲ್ಲೆಯಲ್ಲಿ ನಡೆದಿದೆ.
ಅಯಾನ್ ಮಂಡಲ್ ಎಂಬಾತನೇ ಕೊಲೆಯಾದ ಯುವಕ ಎಂದು ಗುರುತಿಸಲಾಗಿದೆ. ಈ ಕೊಲೆ ಸಂಬಂಧ ಯುವತಿ, ಆಕೆಯ ತಾಯಿ, ತಂದೆ, ಸಹೋದರ ಮತ್ತು ಇಬ್ಬರು ಸಹಚರರು ಸೇರಿದಂತೆ ಒಟ್ಟು ಆರು ಜನರನ್ನು ಪೊಲೀಸರು ಬಂಧಿಸಿದ್ದಾರೆ.
ಕ್ಯಾಬ್ ಚಾಲಕನಾಗಿದ್ದ ಅಯಾನ್ ಮಂಡಲ್ ತನ್ನ ಗೆಳತಿ ಹಾಗೂ ಆಕೆಯ ತಾಯಿಯೊಂದಿಗೂ ಸಂಬಂಧ ಹೊಂದಿದ್ದರು ಎಂದು ಹೇಳಲಾಗಿದೆ. ವಿಜಯ ದಶಮಿ ನಿಮಿತ್ತ ಬುಧವಾರ ಸಂಜೆ ತನ್ನ ಗೆಳತಿಗೆ ಕರೆ ಮಾಡಿ ಸಂಪರ್ಕ ಸಾಧಿಸಲು ಯತ್ನಿಸಿದ್ದರು. ಆದರೆ, ಗೆಳತಿ ಪದೇ ಪದೆ ಕರೆಗಳನ್ನು ಕಡಿತಗೊಳಿಸಿದ್ದರು. ಇದರಿಂದ ಮಂಡಲ್ ನಶೆಯಲ್ಲಿ ತನ್ನ ಗೆಳತಿ ಮನೆಗೆ ತೆರಳಿದ್ದ ಎಂದು ತಿಳಿದು ಬಂದಿದೆ.
ಮನೆಗೆ ತಲುಪಿದ ಬಳಿಕ ಗೆಳತಿಯ ತಾಯಿಯೊಂದಿಗೆ ಮಂಡಲ್ ಜಗಳ ಮಾಡಿದ್ದಾರೆ. ಅಲ್ಲದೇ, ಆಕೆ ಮೇಲೆ ಹಲ್ಲೆ ಕೂಡ ನಡೆಸಿದ್ದಾರೆ. ಆಗ ತಕ್ಷಣವೇ ಗೆಳತಿ ಹಾಗೂ ಆಕೆಯ ಸಹೋದರ ಮತ್ತು ತಂದೆ ಬಂದಿದ್ದಾರೆ. ಇದರಿಂದ ಈ ಜಗಳವು ವಿಕೋಪಕ್ಕೆ ತಿರುಗಿದೆ. ಈ ವೇಳೆ ಮಂಡಲ್ ತಲೆಗೆ ಸಹೋದರ ಭಾರವಾದ ವಸ್ತುವಿನಿಂದ ಹೊಡೆದಿದ್ದಾರೆ. ಪರಿಣಾಮ ಮಂಡಲ್ ಸ್ಥಳದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನಂತರ ನಾಲ್ವರು ಸೇರಿಕೊಂಡು ಹೇಗಾದರೂ ಮಾಡಿ ಶವವನ್ನು ದೂರ ಎಸೆಯಲು ನಿರ್ಧರಿಸಿದ್ದಾರೆ. ಇದಕ್ಕಾಗಿ ಆಕೆಯ ಸಹೋದರ ತನ್ನ ಇಬ್ಬರು ನಿಕಟ ಸಹಚರರನ್ನು ಸಂಪರ್ಕಿಸಿ, ಪಿಕ್ ಅಪ್ ವ್ಯಾನ್ ಬಾಡಿಗೆಗೆ ಪಡೆದು ಶವವನ್ನು ಮಗ್ರಾಹತ್‌ನ ಏಕಾಂತ ಸ್ಥಳಕ್ಕೆ ತೆಗೆದುಕೊಂಡು ಹೋಗಿ ಎಸೆದಿದ್ದಾರೆ. ಇತ್ತ, ಗುರುವಾರ ಬೆಳಗ್ಗೆ ಮಂಡಲ್ ಕುಟುಂಬಸ್ಥರು ನಾಪತ್ತೆ ದೂರು ದಾಖಲಿಸಿದ್ದು, ದೂರಿನ ಬೆನ್ನಟ್ಟಿದಾಗ ಕೊಲೆಯಾಗಿರುವುದು ಬಯಲಿಗೆ ಬಂದಿದೆ. ಶುಕ್ರವಾರ ರಾತ್ರಿ ಅಯಾನ್ ಮಂಡಲ್ ಮೃತದೇಹ ಪತ್ತೆಯಾಗಿದೆ ಎಂದು ಪೊಲೀಸ್ ಅಧಿಕಾರಿ ವಿವರಿಸಿದ್ದಾರೆ.
ಇದೇ ವೇಳೆ, ಪ್ರಕರಣವು ಪ್ರಮುಖವಾದ ತಿರುವು ಬಂದಿದೆ. ಅಯಾನ್ ಮನೆಗೆ ಬಂದಿದ್ದ ಗೆಳತಿಯು ತಾನು ಗರ್ಭಿಣಿ ಹಾಗೂ ತನ್ನ ಹೊಟ್ಟೆಯಲ್ಲಿ ಮಗುವಿದೆ ಅಂತಾ ಹೇಳಿಕೊಂಡಿರುವುದಾಗಿ ಅಯಾನ್ನ ತಾಯಿ ತಿಳಿಸಿದ್ದಾರೆ ಎನ್ನಲಾಗಿದೆ. ಹೀಗಾಗಿಯೇ ಈ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ನಡೆಸಲು ಮುಂದಾಗಿದ್ದಾರೆ.