ಭಾರತ ಕ್ರಿಕೆಟ್ ತಂಡದ ಆಟಗಾರ ರಿಂಕು ಸಿಂಗ್ ಹಾಗೂ ಸಮಾಜವಾದಿ ಪಕ್ಷದ ಯುವ ಸಂಸದೆ ಪ್ರಿಯಾ ಸರೋಜ್ ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂದು ಕುಟುಂಬ ಮೂಲಗಳಿಂದ ತಿಳಿದುಬಂದಿದೆ.
ಪ್ರಿಯಾ ಸರೋಜ್ ಅವರ ತಂದೆ ಹಾಗೂ ಸಮಾಜವಾದಿ ಪಕ್ಷದ ಶಾಸಕ ತೂಫಾನಿ ಸರೋಜ್ ಈ ಸುದ್ದಿಯನ್ನು ಮಾಧ್ಯಮಗಳಿಗೆ ಖಚಿತಪಡಿಸಿದರು.
“ಎರಡೂ ಕುಟುಂಬಗಳು ಈ ಸಂಬಂಧ ಕುರಿತು ಮಾತುಕತೆ ಪೂರ್ಣಗೊಳಿಸಿವೆ. ರಿಂಕು ಸಿಂಗ್ ಅವರ ಪಾಲಕರು ಜ. 16ರಂದು ಅಲಿಗಢದಲ್ಲಿ ನಮ್ಮನ್ನು ಭೇಟಿ ಮಾಡಿ ವಿವರಣೆ ನಡೆಸಿದ್ದಾರೆ. ಆದರೆ ನಿಶ್ಚಿತಾರ್ಥ ಮತ್ತು ಮದುವೆ ದಿನಾಂಕಗಳನ್ನು ನಿಗದಿಪಡಿಸುವ ಕಾರ್ಯ ಇನ್ನೂ ಬಾಕಿಯಾಗಿದೆ,” ಎಂದು ಅವರು ಹೇಳಿದರು.
ತೂಫಾನಿ ಸರೋಜ್ ಅವರ ಹೇಳಿಕೆಯ ಪ್ರಕಾರ, ರಿಂಕು ಮತ್ತು ಪ್ರಿಯಾ ಕಳೆದ ಒಂದು ವರ್ಷದಿಂದ ಪರಸ್ಪರ ಪರಿಚಿತರಾಗಿ, ಮೆಚ್ಚಿಕೆ ವ್ಯಕ್ತಪಡಿಸಿದ್ದರು. ಈ ಸಂಬಂಧಕ್ಕೆ ಎರಡೂ ಕುಟುಂಬಗಳ ಹಿರಿಯರ ಒಪ್ಪಿಗೆಯನ್ನು ಪಡೆದು, ಇದೀಗ ಈ ಸಂಬಂಧವನ್ನು ಅಧಿಕೃತಗೊಳಿಸಲಾಗಿದೆ.
ತೂಫಾನಿ ಸರೋಜ್ ಅವರ ಪ್ರಕಾರ, “ಪ್ರಿಯಾ ಅವರ ಸ್ನೇಹಿತೆಯ ತಂದೆಯೂ ಕ್ರಿಕೆಟರ್ ಆಗಿದ್ದರಿಂದ, ಅವರ ಮೂಲಕ ಪ್ರಿಯಾ ಹಾಗೂ ರಿಂಕು ಪರಿಚಯ ಹೊಂದಿದರು. ನಿಶ್ಚಿತಾರ್ಥ ಮತ್ತು ಮದುವೆ ಸಂಬಂಧಿತ ಕಾರ್ಯಕ್ರಮಗಳನ್ನು ಸಂಸತ್ ಅಧಿವೇಶನದ ನಂತರ ಆಯೋಜಿಸಲಾಗುವುದು. ನಿಶ್ಚಿತಾರ್ಥವನ್ನು ಲಖನೌನಲ್ಲಿ ನಡೆಸಲು ನಿರ್ಧರಿಸಲಾಗಿದೆ.”
ಜ. 22ರಿಂದ ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಟಿ20 ಸರಣಿಯಲ್ಲಿ ರಿಂಕು ಸಿಂಗ್ ಆಟವಾಡಲಿದ್ದಾರೆ. ಇದಾದ ಬಳಿಕ ಅವರು ಐಪಿಎಲ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಪ್ರತಿನಿಧಿಸಲಿದ್ದಾರೆ. ಈ ಕಾರಣದಿಂದ ಮದುವೆ ಕಾರ್ಯಕ್ರಮಗಳು ರಿಂಕು ಅವರ ಕ್ರೀಡಾ ಶಿಡ್ಯೂಲ್ ಗೆ ಅಡ್ಡಿಯಾಗದಂತೆ ಪ್ಲಾನ್ ಮಾಡಲಾಗುವುದು ಎಂದು ತೂಫಾನಿ ಸರೋಜ್ ತಿಳಿಸಿದ್ದಾರೆ.
ಪ್ರಿಯಾ ಸರೋಜ್ ವಾರಾಣಸಿಯ ಕಾರ್ಖಿಯೊ ಗ್ರಾಮದ ನಿವಾಸಿಯಾಗಿದ್ದು, 25ನೇ ವಯಸ್ಸಿನಲ್ಲಿ ಜೌನ್ಪುರ ಜಿಲ್ಲೆಯ ಮಚ್ಲಿಶಹರ್ ಕ್ಷೇತ್ರದಿಂದ ಸಂಸತ್ತಿಗೆ ಆಯ್ಕೆಯಾಗಿದ್ದಾರೆ. ಅವರು ದೆಹಲಿ ವಿಶ್ವವಿದ್ಯಾಲಯದಲ್ಲಿ ಪದವಿ ಪೂರ್ಣಗೊಳಿಸಿದ್ದು, ಅಮಿಟಿ ವಿಶ್ವವಿದ್ಯಾಲಯದ ಕಾನೂನು ಪದವೀಧರರಾಗಿದ್ದಾರೆ. ಪ್ರಿಯಾ ಸುಪ್ರೀಂ ಕೋರ್ಟ್‌ನಲ್ಲಿ ವಕೀಲರಾಗಿ ಸೇವೆ ಸಲ್ಲಿಸಿದ ಅನುಭವವನ್ನೂ ಹೊಂದಿದ್ದಾರೆ. 2022ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ತಂದೆಯ ಪರ ಪ್ರಚಾರ ಮಾಡುತ್ತಾ, ರಾಜಕೀಯದಲ್ಲಿ ಗುರುತಿಸಿಕೊಂಡಿದ್ದಾರೆ.