ತುಮಕೂರು ಜಿಲ್ಲೆಯ ಗುಬ್ಬಿ ಪಟ್ಟಣದಲ್ಲಿ 15 ಲಕ್ಷ ನಗದು ಕಳ್ಳತನಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಬ್ಬಿ ಪೊಲೀಸ್ ಠಾಣೆ ಪೊಲೀಸರು ಇಬ್ಬರು ಅಂತರ್-ರಾಜ್ಯ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಘಟನೆ ವಿವರ

ದಿನಾಂಕ 07-01-2025, ರಾತ್ರಿ 07:30 ಗಂಟೆಗೆ ಶಿವರಾಜು ಎಂಬುವವರು ಗುಬ್ಬಿ ಪೊಲೀಸ್ ಠಾಣೆಗೆ ದೂರು ನೀಡಿದರು. ಅವರ ಹೇಳಿಕೆ ಪ್ರಕಾರ, ಮಧ್ಯಾಹ್ನ 03:10 ಗಂಟೆಗೆ ಅವರು ನಿಟ್ಟೂರಿನ ಎಸ್.ಬಿ.ಎಂ ಬ್ಯಾಂಕ್‌ನಿಂದ 15 ಲಕ್ಷ ರೂ. ನಗದು ಡ್ರಾ ಮಾಡಿ, ತಮ್ಮ ಕಾರಿನಲ್ಲಿ ಇಟ್ಟು, ಗುಬ್ಬಿ ಎಪಿಎಂಸಿ ಕಛೇರಿ ಮುಂಭಾಗ ನಿಲ್ಲಿಸಿದ್ದರು. ಕಛೇರಿಯಲ್ಲಿ ಕೆಲಸ ಮುಗಿಸಿ ವಾಪಸ್ ಬಂದು ನೋಡಿದಾಗ, ಕಾರಿನಲ್ಲಿದ್ದ 15 ಲಕ್ಷ ನಗದು ಹಾಗೂ ಇತರ ದಾಖಲೆಗಳನ್ನು ಯಾರೋ ಕಳ್ಳರು ಕದ್ದೊಯ್ದಿದ್ದರು.

ಈ ಸಂಬಂಧ ಗುಬ್ಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ (ಮೊ.ನಂ. 11/2025, ಕಲಂ 303(2) ಬಿಎನ್‌ಎಸ್) ದಾಖಲಿಸಿಕೊಂಡು ತನಿಖೆ ಆರಂಭಿಸಲಾಯಿತು.

ಬಂಧಿತರ ವಿವರ

ತುಮಕೂರು ಜಿಲ್ಲಾ ಪೊಲೀಸ್ ಅಧೀಕ್ಷಕ ಅಶೋಕ್ ಕೆ.ವಿ, ಐ.ಪಿ.ಎಸ್ ಅವರ ಮಾರ್ಗದರ್ಶನದಲ್ಲಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು ವಿ. ಮರಿಯಪ್ಪ ಮತ್ತು ಬಿ.ಎಸ್. ಅಬ್ದುಲ್ ಖಾದರ್, ಸಿರಾ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಬಿ.ಕೆ. ಶೇಖರ್, ಗುಬ್ಬಿ ವೃತ್ತದ ಸಿಪಿಐ ರಾಘವೇಂದ್ರ ಟಿ.ಆರ್ ನೇತೃತ್ವದಲ್ಲಿ ತನಿಖಾ ತಂಡ ಕಾರ್ಯಚರಣೆ ನಡೆಸಿತು.

ಈ ತಂಡ ಗುಬ್ಬಿ ಪೊಲೀಸ್ ಪಿಎಸ್‌ಐ-1 ಸುನೀಲ್ ಕುಮಾರ್ ಜಿ.ಕೆ, ಸಿಬ್ಬಂದಿ ನವೀನ್ ಕುಮಾರ್, ವಿಜಯಕುಮಾರ್, ಮಧುಸೂಧನ್ ಮತ್ತು ಜಿಲ್ಲಾ ಪೊಲೀಸ್ ಕಛೇರಿಯ ಸಿಬ್ಬಂದಿ ನರಸಿಂಹರಾಜು ಅವರ ಸಹಾಯದಿಂದ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಿದೆ.

ಬಂಧಿತ ಆರೋಪಿಗಳು

1. ಶಿವ ಜಿ. (44 ವರ್ಷ), ಮೇಸ್ತ್ರಿ ಕೆಲಸ, ಓಜಿಕುಪ್ಪಂ, ಕಾವೇಟಿಪುರಂ, ನಗರಿ ಮಂಡಲ್, ಚಿತ್ತೂರು ಜಿಲ್ಲೆ, ಆಂಧ್ರಪ್ರದೇಶ

2. ಸುಬ್ರಮಣ್ಯಂ @ ಮಣಿ (38 ವರ್ಷ), ಕೂಲಿ ಕೆಲಸ, ಓಜಿಕುಪ್ಪಂ, ಕಾವೇಟಿಪುರಂ, ನಗರಿ ಮಂಡಲ್, ಚಿತ್ತೂರು ಜಿಲ್ಲೆ, ಆಂಧ್ರಪ್ರದೇಶ

ಪತ್ತೆಯಾದ ಸ್ವತ್ತುಗಳು

ಬಂಧಿತರಿಂದ 13.60 ಲಕ್ಷ ನಗದು ಹಾಗೂ ಒಂದು ಚಿನ್ನದ ಬ್ರಾಸ್ ಲೈಟ್ ಸೇರಿ ಒಟ್ಟು 16 ಲಕ್ಷ ರೂ. ಮೌಲ್ಯದ ಸ್ವತ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

ಅಂತರ ರಾಜ್ಯ ಅಪರಾಧಿಗಳು

ಈ ಆರೋಪಿತರು ತುಮಕೂರು ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವರು:

  • ಗುಬ್ಬಿ ಪೊಲೀಸ್ ಠಾಣೆ – 01 ಪ್ರಕರಣ
  • ಸಿರಾ ಪೊಲೀಸ್ ಠಾಣೆ – 02 ಪ್ರಕರಣ
  • ಚಿಕ್ಕನಾಯಕನಹಳ್ಳಿ ಪೊಲೀಸ್ ಠಾಣೆ – 01 ಪ್ರಕರಣ
  • ನೊಣವಿಕೆರೆ ಪೊಲೀಸ್ ಠಾಣೆ – 01 ಪ್ರಕರಣ

ಈ ಎಲ್ಲಾ 5 ಪ್ರಕರಣಗಳಲ್ಲಿಯೂ ಆರೋಪಿತರು ಭಾಗಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮತ್ತಷ್ಟು ಆರೋಪಿಗಳ ಪತ್ತೆಗೆ ಹುಡುಕಾಟ

ಈ ಪ್ರಕರಣದಲ್ಲಿ ಇನ್ನೂ ಮೂವರು ಅಂಕಯ್ಯ, ಕಿರಣ್ ಮತ್ತು ರಾಜ್ಯಶೇಖರಯ್ಯ ತಲೆಮರೆಸಿಕೊಂಡಿದ್ದು, ಪೊಲೀಸರು ಅವರ ಪತ್ತೆ ಕಾರ್ಯವನ್ನು ಮುಂದುವರೆಸಿದ್ದಾರೆ.

ಪೊಲೀಸ್ ತಂಡಕ್ಕೆ ಪ್ರಶಂಸೆ

ಈ ಯಶಸ್ವಿ ಕಾರ್ಯಾಚರಣೆಗೆ ತುಮಕೂರು ಜಿಲ್ಲಾ ಪೊಲೀಸ್ ಅಧೀಕ್ಷಕ ಅಶೋಕ್ ಕೆ.ವಿ, ಐ.ಪಿ.ಎಸ್ ಅವರು ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಪ್ರಶಂಸಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!