
ನಗರದ ಕರಾಡಿಮೊಲ್ಲಾದ ಸರ್ಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಿಂದ ವಿದ್ಯಾರ್ಥಿಗೆ ಹಲ್ಲೆ ನಡೆದಿರುವ ಘಟನೆ ಬೆಳಕಿಗೆ ಬಂದಿದೆ. 5ನೇ ತರಗತಿಯ ವಿದ್ಯಾರ್ಥಿ ರೆಹಮಾನ್ ಅವರ ಮೇಲೆ ಆಂಗ್ಲ ಭಾಷೆ ಶಿಕ್ಷಕ ಮಲ್ಲೇಶ್ ಅಮಾನವೀಯವಾಗಿ ಹಿಂಸೆ ಹೇರಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ.
ಘಟನೆಯ ವಿವರಗಳ ಪ್ರಕಾರ, ಶಿಕ್ಷಕ ಮಲ್ಲೇಶ್ ವಿದ್ಯಾರ್ಥಿಯ ಕೆನ್ನೆ ಮತ್ತು ಬೆನ್ನಿನ ಮೇಲೆ ಬರೆ ಬರುವಂತೆ ಹೊಡೆದಿದ್ದು, ದೇಹದಲ್ಲಿ ಬೆರಳಿನ ಗುರುತುಗಳು ಸ್ಪಷ್ಟವಾಗಿ ಕಾಣಿಸುತ್ತಿದ್ದವು. ಈ ಘಟನೆಯ ಬಗ್ಗೆ ಮಾಹಿತಿ ಪಡೆದ ಪೋಷಕರು ಕೋಪೋದ್ರಿಕ್ತರಾಗಿ ವಿದ್ಯಾರ್ಥಿಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ಕರೆದುಕೊಂಡು ಹೋಗಿ ಶಿಕ್ಷಕನ ವಿರುದ್ಧ ದೂರು ಸಲ್ಲಿಸಿದರು.
ಪೋಷಕರ ಆಕ್ರೋಶದ ಹಿನ್ನೆಲೆಯಲ್ಲಿ, ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಪ್ಪ ಶಿಕ್ಷಕ ಮಲ್ಲೇಶ್ ಅವರನ್ನು ಕಚೇರಿಗೆ ಕರೆಯಿಸಿ ವಿಚಾರಣೆ ನಡೆಸಿದರು. ಮುಂದಿನ ದಿನಗಳಲ್ಲಿ ಈ ರೀತಿಯ ಘಟನೆಗಳು ಪುನಾರಾವೃತವಾಗದಂತೆ ಎಚ್ಚರಿಕೆ ನೀಡಿದ ಅಧಿಕಾರಿಗಳು, ಯಾವುದೇ ಕಾರಣಕ್ಕೂ ಮಕ್ಕಳನ್ನು ಹೊಡೆಯದೆ ಪ್ರೀತಿ, ಸಹನೆಯೊಂದಿಗೆ ಬೋಧನೆ ನೀಡಬೇಕು ಎಂದು ತೀವ್ರ ಸೂಚನೆ ನೀಡಿದರು.
ಈ ಸಂಬಂಧ ಪೋಷಕರು, ಶಿಕ್ಷಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದು, ಅವಸರದಲ್ಲಿ ಅವರ ಅಮಾನತು ಮತ್ತು ಮುಂದಿನ ಪರಿಶೀಲನೆಗೆ ಅಧಿಕಾರಿಗಳು ಸ್ಪಷ್ಟತೆ ನೀಡಬೇಕೆಂದು ಒತ್ತಾಯಿಸಿದರು.