ತಂತ್ರಜ್ಞಾನ ಬೆಳೆದಂತೆಲ್ಲ ಕಳ್ಳರ ಬುದ್ಧಿವಂತಿಕೆಯು ಬೆಳೆಯುತ್ತಲೇ ಇದೆ. ಮನೆಗಳಲ್ಲಿ ದೇವಸ್ಥಾನಗಳಲ್ಲಿ ಅಂಗಡಿ ಮುಂಗಟ್ಟುಗಳಲ್ಲಿ ಕಳ್ಳರು ಕಳ್ಳತನ ಮಾಡಿದ್ದಾರೆ ಎಂಬುವ ವಿಚಾರ ತಾವು ಸಹಜವಾಗಿಯೇ ಕೇಳಿರುತ್ತೀರಿ. ಆದರೆ ತಂತ್ರಜ್ಞಾನ ಬೆಳೆದಂತೆಲ್ಲ ನೇರವಾಗಿ ಹೋಗಿ ಕಳ್ಳತನ ಮಾಡುತ್ತಿದ್ದ ಕಳ್ಳರೆಲ್ಲ ಎಲ್ಲೋ ಕೂತು ಸಾಮಾಜಿಕ ಜಾಲತಾಣಗಳ ಮೂಲಕ ದರೋಡೆ ಮಾಡಲು ಮುಂದಾಗಿದ್ದಾರೆ. ಕಳ್ಳರು ಅಥವಾ ದರೋಡೆಕೋರರು ಎಂದರೆ ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವುದೇನೆಂದರೆ ಅವರಿಗೆ ವಿದ್ಯಾಭ್ಯಾಸ ವಿರುವುದಿಲ್ಲ ಕೆಲಸವು ಇರುವುದಿಲ್ಲ ಆದಕಾರಣ ಅಡ್ಡದಾರಿಯನ್ನು ಹಿಡಿದು ಕಳ್ಳತನವನ್ನು ಮಾಡಲು ರೂಡಿ ಮಾಡಿಕೊಂಡಿರುತ್ತಾರೆ ಎಂದು ಭಾವಿಸಿರುತ್ತಾರೆ. ಆದರೆ ಈಗಿನ ಸಾಮಾಜಿಕ ಜಾಲತಾಣದಲ್ಲಿ ಕಳ್ಳತನ ಮಾಡಲು ಮುಂದಾಗಿರುವ ಕಳ್ಳರು ಮಾತ್ರ ಅತಿಬುದ್ದಿವಂತರು. ಒಳ್ಳೆಯ ವಿದ್ಯಾಭ್ಯಾಸ ಮಾಡಿ ತಂತ್ರಜ್ಞಾನದ ಬಗ್ಗೆ ಅರಿತು ಸಾಮಾಜಿಕ ಜಾಲತಾಣಗಳನ್ನು ಬಂಡವಾಳವಾಗಿ ಮಾಡಿಕೊಂಡು ಜನರ ದೌರ್ಬಲ್ಯವನ್ನು ತಮ್ಮ ಲಾಭಕ್ಕಾಗಿ ಬಳಸಿಕೊಳ್ಳುವುದರ ಮೂಲಕ ದರೋಡೆ ಮಾಡುತ್ತಿದ್ದಾರೆ. ತಮಗಾಗಲಿ ಅಥವಾ ತಮ್ಮ ಸ್ನೇಹಿತರುಗಳಿಗಾಗಲಿ ಈ ರೀತಿಯ ಅನುಭವ ಆಗಿರಬಹುದು ಸಾಮಾಜಿಕ ಜಾಲತಾಣಗಳಲ್ಲಿ ಹೊರದೇಶದ ಹುಡುಗಿಯರ ಚಿತ್ರವನ್ನು ಹಾಕಿರುವ ಖಾತೆಯಿಂದ ತಮಗೆ ವಿನಂತಿ ಬಂದಿರಬಹುದು. ದರೋಡೆ ಮಾಡಲು ಮುಂದಾಗಿರುವ ಆನ್ಲೈನ್ ದರೋಡೆಕೋರರ ಮೊದಲ ಹೆಜ್ಜೆ ಇದು. ಹುಡುಗರಿಗೆ ಇವರುಗಳು ಹೆಚ್ಚಾಗಿ ವಿನಂತಿಗಳನ್ನು ಕಳುಹಿಸುವುದು. ಈ ರೀತಿಯಾಗಿ ಬಂದಿರುವ ವಿನಂತಿಯನ್ನು ಒಂದುವೇಳೆ ತಾವುಗಳು ಸ್ವೀಕರಿಸಿದರೆ ಅಲ್ಲಿಗೆ ಮುಗಿಯಿತು ತಮ್ಮ ಕಥೆ. ಕೆಲವೇ ಗಂಟೆಗಳಲ್ಲಿ ತಮಗೆ ಎಷ್ಟೊ ವರ್ಷದ ಸ್ನೇಹವಿದೆ ಎಂಬ ರೀತಿಯಲ್ಲಿ ಬಿಂಬಿಸುವಂತೆ ತಮಗೆ ಸಂದೇಶಗಳನ್ನು ಕಳುಹಿಸುತ್ತಾರೆ. ಆ ಸಂದೇಶಗಳಿಗೆ ತಾವು ಮರುಳಾಗಿ ಅವರಿಗೆ ಪ್ರತಿಕ್ರಿಯಿಸಿದರೆ ಕೆಲವೇ ಗಂಟೆಗಳಲ್ಲಿ ಲೈಂಗಿಕ ಸಂಬಂಧಿ ವಿಚಾರಗಳ ಬಗ್ಗೆ ಚರ್ಚಿಸಲು ಮುಂದಾಗುತ್ತಾರೆ. ಮೊದಲೇ ವಯಸ್ಸಿನ ಹುಡುಗರು ಈ ರೀತಿಯ ಸಂದೇಶಗಳನ್ನು ಕಂಡ ತಕ್ಷಣವೇ ಸ್ವರ್ಗ ಸಿಕ್ಕಷ್ಟೇ ಖುಷಿಪಡುತ್ತಾರೆ ಹಾಗೂ ಅವರುಗಳು ಹೇಳಿದಂತೆ ಕೇಳಲು ಮುಂದಾಗುತ್ತಾರೆ. ಹುಡುಗನ ಕಡೆಯಿಂದ ಪ್ರತಿಕ್ರಿಯೆ ಚೆನ್ನಾಗಿದ್ದರೆ ವಿಡಿಯೋ ಕರೆ ಮಾಡಲು ಮುಂದಾಗುತ್ತಾರೆ. ಹಾಗೂ ವಿಡಿಯೋ ಕರೆಯಲ್ಲಿ ಹುಡುಗನಿಗೆ ಬೆತ್ತಲಾಗಲು ಹೇಳುತ್ತಾರೆ. ಅವರ ಮಾತುಗಳಿಗೆ ಮರುಳಾಗಿರುವ ಹುಡುಗ ಏನು ನಡೆಯುತ್ತಿದೆ ಎಂಬುದನ್ನು ಅರಿಯದೆ ಅವರು ಹೇಳಿದಂತೆಲ್ಲಾ ಕೇಳಿ ಬೆತ್ತಲಾಗಿ ವಿಡಿಯೋ ಕರೆಯನ್ನು ಮಾಡುತ್ತಾನೆ ಅಥವಾ ಬಂದಿರುವ ವಿಡಿಯೋ ಕರೆಯನ್ನು ಸ್ವೀಕರಿಸಿರುತ್ತಾನೆ. ಈ ರೀತಿಯ ಕರೆಯನ್ನು ಸ್ವೀಕರಿಸಿದ ಎಂದರೆ ಅಲ್ಲಿಗೆ ಅವನ ಜೇಬಿಗೆ ಕತ್ತರಿ ಬೀಳುವುದು ಖಚಿತ. ವಿಡಿಯೋ ಕರೆಯನ್ನು ಸ್ವೀಕರಿಸಿದ ಹುಡುಗನಿಗೆ ಮಾತ್ರ ಹುಡುಗಿಯ ಭಾವಚಿತ್ರ ಕಾಣಿಸುತ್ತದೆ ಆದರೆ ಅದರಲ್ಲಿ ಹುಡುಗನು ಬೆತ್ತಲಾಗಿರುವ ವೀಡಿಯೋವನ್ನು ಅವರುಗಳು ಚಿತ್ರಿಸಿ ಕೊಳ್ಳುತ್ತಿರುವ ಬಗ್ಗೆ ಹುಡುಗನಿಗೆ ಅರಿವಿರುವುದಿಲ್ಲ. ವಿಡಿಯೋ ಕರೆಯಲ್ಲಿ ಸರಿಯಾಗಿ ಏನೂ ಕಾಣಿಸುತ್ತಿಲ್ಲ ಎಂದುಕೊಂಡು ಬೇಸರದಲ್ಲಿ ಹುಡುಗ ಸುಮ್ಮನಾಗಿಬಿಡುತ್ತಾನೆ. ಇದಾದ ಬಳಿಕವೇ ಅವರುಗಳ ಅಸಲಿ ಆಟ ಶುರು ಮಾಡುತ್ತಾರೆ. ಚಿತ್ರಿಸಿರುವ ಬೆತ್ತಲೆ ವಿಡಿಯೋವನ್ನು ಕಳುಹಿಸಿ. ಈ ದೃಶ್ಯಗಳನ್ನು ತಮ್ಮ ಸ್ನೇಹಿತರುಗಳಿಗೆ ಹಾಗೂ ತಮ್ಮ ಸಂಬಂಧಿಕರುಗಳಿಗೆ ಕಳುಹಿಸುತ್ತೇನೆ ಕಳುಹಿಸಬಾರದೆಂದರೆ ನನಗೆ ಹಣವನ್ನು ಕೊಡು ಎಂದು ಬೇಡಿಕೆ ಇಡುತ್ತಾರೆ. ಇಂತಹ ಸಂದರ್ಭದಲ್ಲಿ ಹುಡುಗ ಇವರುಗಳ ಮಾತಿಗೆ ಒಪ್ಪದಿದ್ದರೆ ಮೊದಲನೆಯದಾಗಿ ಸಾಮಾಜಿಕ ಜಾಲತಾಣದಲ್ಲಿ ಈತನಿಗಿರುವ ಸ್ನೇಹಿತರುಗಳಲ್ಲಿ ಕೆಲವೊಬ್ಬರಿಗೆ ವಿಡಿಯೋಗಳನ್ನು ಕಳುಹಿಸುತ್ತಾರೆ. ನಂತರ ತಮ್ಮ ಸಂಬಂಧಿಕರುಗಳಿಗೆ ಕಳುಹಿಸುತ್ತೇವೆ ಎಂದು ಬೆದರಿಸುತ್ತಾರೆ. ಹುಡುಗ ಒಪ್ಪಿಕೊಂಡು ಒಮ್ಮೆ ಅವರಿಗೆ ಹಣ ಕೊಟ್ಟರೆ ಮುಗೀತು. ಪದೇ ಪದೇ ಮತ್ತೆ ಬೇಡಿಕೆ ಇಡಲು ಮುಂದಾಗುತ್ತಾರೆ. ಈ ರೀತಿಯ ವಿಚಾರದ ಬಗ್ಗೆ ದೂರು ನೀಡಲು ಹುಡುಗನಿಗೆ ಮುಜುಗರ. ದೂರು ನೀಡದೆ ಇದ್ದರೆ ಅವರುಗಳು ಕೇಳಿದಷ್ಟು ಹಣ ಕೊಡುತ್ತಲೇ ಇರಬೇಕು. ಹಣ ಕೊಡದಿದ್ದರೆ ಸ್ನೇಹಿತರು ಹಾಗೂ ಸಂಬಂಧಿಕರುಗಳ ಮುಂದೆ ಮರ್ಯಾದೆ ಹೋಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಸಿಲುಕಿದ ಅದೆಷ್ಟೋ ಜನ ಸಾಮಾಜಿಕ ಜಾಲತಾಣದ ಕಳ್ಳರಿಗೆ ಅವರು ಬೇಡಿಕೆ ಇಟ್ಟಷ್ಟು ಹಣವನ್ನು ಸಹ ನೀಡಿದ್ದಾರೆ. ಕೆಲವರು ೧೦ ಸಾವಿರದವರೆಗೂ ಕೊಟ್ಟರೆ ಕೆಲವೊಬ್ಬರು ೨೦ ಸಾವಿರದವರೆಗೆ ಕೊಟ್ಟಿದ್ದಾರೆ ನಂತರ ನಮ್ಮ ಕೈಯಲ್ಲಿ ಹಣ ಕೊಡಲು ಸಾಧ್ಯವಿಲ್ಲ ಎಂದಾಗ ವಿಡಿಯೋವನ್ನು ಎಲ್ಲರಿಗೂ ಕಳುಹಿಸಿ ಸಾಮಾಜಿಕ ಜಾಲತಾಣದ ಕಳ್ಳರು ಸುಮ್ಮನಾಗಿಬಿಡುತ್ತಾರೆ. ಇದರಲ್ಲಿ ಮುಖ್ಯವಾದ ವಿಚಾರವೇನೆಂದರೆ ತಮಗೆ ಸಂದೇಶ ಬಂದಾಗ ಮತ್ತು ವಿಡಿಯೋ ಕರೆ ಬಂದಾಗ ಕಾಣಿಸುವುದು ಮಾತ್ರ ಹುಡುಗಿಯ ಚಿತ್ರ ಆದರೆ ಇದರ ಹಿಂದೆ ಕೂತು ಇದನ್ನೆಲ್ಲ ನಡೆಸುತ್ತಿರುವುದು ಮಾತ್ರ ಹುಡುಗರು. ಹುಡುಗನನ್ನು ಹುಡುಗಿ ಎಂದು ಭಾವಿಸಿ ಈರೀತಿಯ ಸಂಕಷ್ಟದಲ್ಲಿ ಸಿಲುಕಿ ತಮ್ಮ ಜೇಬುಗಳಿಗೆ ಕತ್ತರಿ ಹಾಕಿಸಿಕೊಂಡ ಹುಡುಗರು ಅದೆಷ್ಟೋ ಜನ. ಇಂತಹ ಪರಿಸ್ಥಿತಿ ತಮಗೆ ಅಥವಾ ತಮ್ಮ ಸುತ್ತಮುತ್ತಲಿನ ಹಲವರಿಗೆ ಬಂದಿರುತ್ತದೆ ಆದರೂ ಸಹ ಅವರುಗಳು ಹೇಳಿಕೊಳ್ಳಲಾರದೆ ಮರ್ಯಾದೆಗೆ ಅಂಜಿ ಸುಮ್ಮನಿರುತ್ತಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸ್ನೇಹಿತರ ವಿನಂತಿ ಕಳುಹಿಸುವುದರ ಮೂಲಕ ಮಾತ್ರವೇ ಅಲ್ಲ ಈ ರೀತಿ ಮಾಡುತ್ತಿರುವುದು. ತಮ್ಮ ವಾಟ್ಸಾಪ್‌ಗೂ ಕೂಡ ನೇರವಾಗಿ ಅವರುಗಳು ಸಂದೇಶ ಕಳುಹಿಸಬಹುದು. ಅಥವಾ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಬರುವ ಹುಡುಗಿಯರ ಜಾಹೀರಾತುಗಳನ್ನು ತಾವುಗಳು ಕ್ಲಿಕ್ಕಿಸುವುದರ ಮೂಲಕವೂ ಈ ರೀತಿಯ ಬಲೆಗೆ ಸಿಲುಕಬಹುದು. ಈ ರೀತಿಯ ಸಾಮಾಜಿಕ ಜಾಲತಾಣದ ಕದೀಮರ ಬಲೆಗೆ ತಾವುಗಳು ಬೀಳದೆ ಇರಬೇಕೆಂದರೆ ತಾವುಗಳು ಮಾಡಬೇಕಿರುವುದು. ಫೇಸ್ಬುಕ್ನಲ್ಲಿ ಅನಾಮಧೇಯ ವ್ಯಕ್ತಿಯ ಸ್ನೇಹಿತರ ವಿನಂತಿಯನ್ನು ಒಪ್ಪಿಕೊಳ್ಳದಿರಿ, ಸಾಮಾಜಿಕ ಜಾಲತಾಣದ ಜಾಹೀರಾತಿನಲ್ಲಿ ಬರುವ ಹುಡುಗಿಯರ ಚಿತ್ರಕ್ಕೆ ಆಕರ್ಷಣೆ ಗೊಂಡು ಕ್ಲಿಕ್ಕಿಸದಿರಿ, ವಾಟ್ಸಪ್‌ನಲ್ಲಿ ಬರುವ ಅನಾಮಧೇಯ ವ್ಯಕ್ತಿಯ ಕರೆಗಳನ್ನು ಸ್ವೀಕರಿಸದಿರಿ, ಡೇಟಿಂಗ್ ಅಪ್ಲಿಕೇಶನ್ಸ್ಗಳಲ್ಲಿ ಹುಡುಗಿಯರು ದೊರೆಯುತ್ತಾರೆ ಎಂಬ ಜಾಹೀರಾತು ಅಥವಾ ಸಂದೇಶಗಳನ್ನು ನಂಬಬೇಡಿ ಮತ್ತು ಅದನ್ನು ಬಳಸಬೇಡಿ, ವಯಸ್ಕರರ ವೆಬ್ಸೈಟ್ಗಳ ಬಗ್ಗೆ ಬರುವ ಸಂದೇಶಗಳನ್ನು ನಿರ್ಲಕ್ಷಿಸಿ. ಹೀಗೆ ಮಾಡುವುದರ ಮೂಲಕ ತಾವು ಸಾಮಾಜಿಕ ಜಾಲತಾಣದ ಕದೀಮರ ಬಲೆಗೆ ಸಿಲುಕುವುದನ್ನು ತಪ್ಪಿಸಬಹುದು. ಒಂದು ವೇಳೆ ತಾವುಗಳು ಈ ರೀತಿಯ ಸಾಮಾಜಿಕ ಜಾಲತಾಣದ ಕದೀಮರ ಬಲೆಗೆ ಸಿಲುಕಿದ್ದರೆ ಅವರುಗಳಿಗೆ ಹಣವನ್ನು ನೀಡುವ ಬದಲು ನೇರವಾಗಿ ದೂರು ನೀಡಲು ಮುಜುಗರವಾದರೆ ಆನ್ಲೈನ್ನಲ್ಲಿ ಸೈಬರ್ ಕ್ರೈಂಗೆ ದೂರು ನೀಡಿ. ಈ ರೀತಿ ದೂರು ನೀಡುವುದರಿಂದ ಸಾಮಾಜಿಕ ಜಾಲತಾಣದ ಖದೀಮರ ಖಾತೆಗಳನ್ನು ಸೈಬರ್ ಕ್ರೈಂ ಪೊಲೀಸರು ಬ್ಲಾಕ್ ಮಾಡಿ ಅವರನ್ನು ಪತ್ತೆಹಚ್ಚಲು ಮುಂದಾಗುತ್ತಾರೆ ಹಾಗೂ ಇದರಿಂದ ಹೆಚ್ಚು ಜನರು ಇಂತಹ ಖದೀಮರ ಬಲೆಗೆ ಬೀಳುವುದನ್ನು ತಪ್ಪಿಸಬಹುದು. ಹಲವರು ನೀಡಿರುವ ದೂರಿನ ಮೇರೆಗೆ ಈಗಾಗಲೇ ಸೈಬರ್ ಕ್ರೈಂ ಪೊಲೀಸರು ಸಾಮಾಜಿಕ ಜಾಲತಾಣದ ಕೆಲವು ಕದೀಮರುಗಳನ್ನು ಸಹ ಬಂಧಿಸಿದ್ದಾರೆ.

error: Content is protected !!