ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ನಾಗರಾಳ ಗ್ರಾಮದ ಶಾಲಾ ಮತ್ತು ಕಾಲೇಜುಗಳಲ್ಲಿ ದಿನಾಂಕ 15-08-2022 ರಂದು ನಡೆದ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡಿರುವ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಭಾವಚಿತ್ರವನ್ನು ಇಡದೆ ಅವಮಾನ ಉಂಟು ಮಾಡಿದ್ದಾರೆ. ಭಾರತ ದೇಶಕ್ಕೆ ಅಂಬೇಡ್ಕರ್ ರವರ ಕೊಡುಗೆಯನ್ನು ಅರಿಯದ ಶಿಕ್ಷಕರು ಮತ್ತು ಅಧಿಕಾರಿ ವರ್ಗದವರು ಇಂತಹ ಕೆಲಸ ಮಾಡಿದ್ದಾರೆ. ಅಂಬೇಡ್ಕರ್ ರವರ ಬಗ್ಗೆ ಮಕ್ಕಳಿಗೆ ಬೋಧಿಸ ಬೇಕಾದಂತಹ ಶಿಕ್ಷಕರೇ ತಮ್ಮ ಶಾಲೆಗಳಲ್ಲಿ ಈ ರೀತಿ ಮಾಡಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ. ಈ ವಿಚಾರವನ್ನು ತಿಳಿದ ಕೆಲ ದಲಿತ ಪರ ಸಂಘಟನೆಗಳು ಹಾಗೂ ಅಂಬೇಡ್ಕರ್ ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸುವುದಲ್ಲದೆ ಅಂಬೇಡ್ಕರ್ ಅವರ ಭಾವಚಿತ್ರವನ್ನು ಇಡದೆ ಅವಮಾನಿಸಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಸಂಬಂಧಪಟ್ಟ ಅಧಿಕಾರಿಗಳ ಬಳಿ ಮನವಿ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ದಲಿತ ಪರ ಸಂಘಟನೆ ಹಾಗೂ ಅಂಬೇಡ್ಕರ್ ಅಭಿಮಾನಿಗಳು ಅಂಬೇಡ್ಕರ್ ರವರ ಬಗ್ಗೆ ಅರಿತು ಅವರಿಗೆ ನೀಡಬೇಕಾದ ಗೌರವವನ್ನು ಶಾಲಾ ಕಾಲೇಜು, ಸರಕಾರಿ ಕಚೇರಿ ಮತ್ತು ಎಲ್ಲೆಡೆ ನೀಡಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುತ್ತೇವೆಂದು ಹೇಳಿಕೆ ನೀಡುವುದರ ಮೂಲಕ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.
ವರದಿ: ಅಶೋಕ ಗುರಕೇರ