ಆರು ತಿಂಗಳ ಗರ್ಭಿಣಿಯನ್ನು ಕೊಂದು ಹೂತು ಹಾಕಿದ್ದ ಪತಿಯನ್ನು ಚನ್ನಗಿರಿ ಪೊಲೀಸರು ಬಂಧಿಸಿದ್ದು, ಇದೀಗ ಮೃತಳ ಅತ್ತೆ, ಮಾವ ಪತ್ತೆಗೆ ಬಲೆ ಬೀಸಿದ್ದಾರೆ. ಚನ್ನಗಿರಿ ತಾಲೂಕಿನ ಉಬ್ರಾಣಿ ಹೋಬಳಿಯ ಗಂಗಗೊಂಡನಹಳ್ಳಿ ಗ್ರಾಮದಲ್ಲಿ ಪ್ರಕರಣ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಮೋಹನ್ ಕುಮಾರ್ (25) ಬಂಧಿತ ಆರೋಪಿ ಆಗಿದ್ದಾನೆ. ದಾವಣಗೆರೆ ತಾಲೂಕಿನ ಐಗೂರು ಗ್ರಾಮದ ಲೋಕೇಶಪ್ಪ ಎಂಬುವವರ ಪುತ್ರಿ ಚಂದ್ರಕಲಾ ಅಲಿಯಾಸ್ ರಶ್ಮಿ (21) ಹತ್ಯೆಗೀಡಾದ ಮಹಿಳೆ ಆಗಿದ್ದಾರೆ. ಗಂಗಗೊಂಡನಹಳ್ಳಿಯ ಮೋಹನ್ ಕುಮಾರ್ ಜೊತೆ ಕಳೆದ ಏಳು ತಿಂಗಳ ಹಿಂದೆಯಷ್ಟೇ ಈಕೆಯ ವಿವಾಹವಾಗಿತ್ತು. ಮದುವೆಯಾದ ಕೆಲವೇ ದಿನಗಳಲ್ಲಿಯೇ ದಾಂಪತ್ಯದಲ್ಲಿ ಬಿರುಕು ಮೂಡಿತ್ತು. ಚಂದ್ರಕಲಾ ಅವರ ಶೀಲ ಶಂಕಿಸಿ ಮೋಹನ್ ಕುಮಾರ್ ಚಿತ್ರಹಿಂಸೆ ನೀಡುತ್ತಿದ್ದ. ಜೊತೆಗೆ ವರದಕ್ಷಿಣೆ ತರುವಂತೆ ಕಿರುಕುಳ ನೀಡಲಾರಂಭಿಸಿದ್ದ ಎನ್ನುವ ಮಾಹಿತಿ ಹೊರಬಿದ್ದಿದೆ.
ಚಂದ್ರಕಲಾ ಅಲಿಯಾಸ್ ರಶ್ಮಿ ಫೋನ್ನಲ್ಲಿ ಯಾರ ಜೊತೆಯೂ ಮಾತನಾಡದಂತೆ ಮೋಹನ್ ಕುಮಾರ್ ನಿರ್ಬಂಧ ವಿಧಿಸಿ ಚಿತ್ರಹಿಂಸೆ ನೀಡುತ್ತಿದ್ದನಂತೆ. ಅಲ್ಲದೇ ಯಾರ ಜೊತೆ ಮಾತನಾಡುತ್ತೀಯಾ, ಯಾರ್ಯಾರ ಜೊತೆ ನಿನಗೆ ಸಂಬಂಧ ಇದೆ ಎಂದು ಪ್ರಶ್ನಿಸುತ್ತಿದ್ದನಂತೆ.
ಚಂದ್ರಕಲಾ ತವರು ಮನೆಯವರಿಗೂ ಕೂಡ ಕದ್ದು ಮುಚ್ಚಿ ಫೋನ್ ಮಾಡಬೇಕಿತ್ತು. ಅಷ್ಟರ ಮಟ್ಟಿಗೆ ಕಿರುಕುಳ ನೀಡುತ್ತಿದ್ದ ಈ ಭೂಪ ಎನ್ನುವುದು ತಿಳಿದುಬಂದಿದೆ. ಈ ವಿಚಾರ ಚಂದ್ರಕಲಾ ಕುಟುಂಬದವರಿಗೂ ಗೊತ್ತಿತ್ತು. ಮದುವೆಯಾದ ಆರಂಭದಲ್ಲಿ ಬೇಗ ಹೊಂದಾಣಿಕೆ ಆಗುವುದಿಲ್ಲ ಎಂಬ ಕಾರಣಕ್ಕೆ ಚಂದ್ರಕಲಾಳಿಗೆ ಬುದ್ಧಿವಾದ ಹೇಳಿ ಗಂಡನ ಮನೆಗೆ ಕಳುಹಿಸುತ್ತಿದ್ದರು.
ಒಂದೂವರೆ ತಿಂಗಳ ಹಿಂದೆ ಗಂಡ ಹೆಂಡತಿಯ ನಡುವಿನ ಜಗಳ ತಾರಕಕ್ಕೇರಿದೆ. ಆಗ ಮೋಹನ್ ಕುಮಾರ್ ಪತ್ನಿ ಚಂದ್ರಕಲಾಳ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ನಂತರ ಪತ್ನಿಯ ಶವವನ್ನು ಯಾರಿಗೂ ಗೊತ್ತಾಗದಂತೆ ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರ ತಾಲೂಕಿನ ಹುಣಘಟ್ಟ ಕಾಡಿನಲ್ಲಿ ಗುಂಡಿ ತೆಗೆದು ಹೂತಿಟ್ಟಿದ್ದ. ಬಳಿಕ ಚಂದ್ರಕಲಾ ಪೋಷಕರಿಗೆ ನಿಮ್ಮ ಮಗಳು ಕಾಣೆ ಆಗಿದ್ದಾಳೆ ಎಂದು ಹೇಳಿ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದ.
ಚಂದ್ರಕಲಾ ಪೋಷಕರಿಗೆ ಮೋಹನ್ ಕುಮಾರ್ ಮೇಲೆ ಮೊದಲಿನಿಂದಲೂ ಅನುಮಾನ ಇತ್ತು. ಸಂಬಂಧಿಕರು ಹಾಗೂ ಕುಟುಂಬದವರಿಗೆ ಕರೆ ಮಾಡಿದ್ದ ಚಂದ್ರಕಲಾಳ ಮಾತುಗಳನ್ನು ಸೂಕ್ಷ್ಮವಾಗಿ ಆಲಿಸಿದ್ದಾರೆ. ತನ್ನ ನೋವುಗಳನ್ನು ಸಹ ಪೋಷಕರ ಬಳಿ ಹೇಳಿಕೊಂಡಿದ್ದಳು. ಗಂಡ, ಅತ್ತೆ, ಮಾವ ಚಿಕ್ಕಪುಟ್ಟ ವಿಷಯಕ್ಕೂ ತೊಂದರೆ ಕೊಡುವ ಕುರಿತಂತೆ ಮಾತನಾಡಿದ್ದು ಗೊತ್ತಾಗಿದೆ. ಆಗ ಮೋಹನ್ ವಿರುದ್ಧ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಟ್ಟಿದ್ದಾರೆ. ನಂತರ ತಹಶೀಲ್ದಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇವರಿಬ್ಬರ ನಡುವೆ ಪ್ರತಿದಿನವೂ ಜಗಳ ನಡೆಯುತಿತ್ತು. ಈ ಹಿನ್ನೆಲೆಯಲ್ಲಿ ಮೋಹನ್ ಕುಮಾರ್ ತಿಂಗಳ ಹಿಂದೆಯೇ ಚಂದ್ರಕಲಾ ಕೊಲೆಗೆ ಸಂಚುರೂಪಿಸಿದ್ದ ಎನ್ನಲಾಗಿದೆ. ಅಜ್ಜಂಪುರ ತಾಲೂಕಿನ ಶಿರಲಿಗಪುರ ಕಣಿವೆ ಬಳಿ ಗುಂಡಿ ತೋಡಿ ಗುರುತು ಮಾಡಿ ಹೋಗಿದ್ದ ಎಂದು ತಿಳಿದುಬಂದಿದೆ. ಅಕ್ಟೋಬರ್ 8ರಂದು ಮನೆಯಲ್ಲಿ ಯಾರೂ ಇಲ್ಲದ ವೇಳೆ ಚಂದ್ರಕಲಾ ಅವರನ್ನು ಕೊಲೆ ಮಾಡಿದ್ದಾನೆ. ನಂತರ ಮಧ್ಯರಾತ್ರಿ ಕಾರಿನಲ್ಲಿ ಮೃತದೇಹ ತೆಗೆದುಕೊಂಡು ಹೋಗಿ ತಾನು ತೆಗೆದಿದ್ದ ಗುಂಡಿಯಲ್ಲಿ ಹೂತಿಟ್ಟು ಬಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಒಟ್ಟಿನಲ್ಲಿ ಬದುಕಿ ಬಾಳಬೇಕಿದ್ದ ಚಂದ್ರಕಲಾ ಅಲಿಯಾಸ್ ರಶ್ಮಿ ಬದುಕು ದುರಂತದಲ್ಲಿ ಅಂತ್ಯ ಕಂಡಿದೆ. ಪಾಪಿ ಪತಿ ಮೋಹನ್ ಕುಮಾರ್ನನ್ನು ಪೊಲೀಸರು ಬಂಧಿಸಿದ್ದು, ಇದೀಗ ಅತ್ತೆ, ಮಾವನ ಪತ್ತೆಗೆ ಬಲೆ ಬೀಸಿದ್ದಾರೆ.