ಗದಗ ಜಿಲ್ಲೆಯಲ್ಲಿ ಸರಣಿ ಕಳ್ಳತನ ನಡೆದಿದ್ದು, ಖದೀಮರು ಒಂದೇ ರಾತ್ರಿ ಮೂರು ಗ್ರಾಮಗಳಲ್ಲಿ ಐದು ಕಡೆ ಸಿನಿಮೀಯ ಶೈಲಿಯಲ್ಲಿ ಕಳ್ಳತನ ಮಾಡಿ ಪರಾರಿಯಾಗಿದ್ದಾರೆ. ಈ ಘಟನೆ ಶಿರಹಟ್ಟಿ ಮತ್ತು ಮುಂಡರಗಿ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮಗಳಲ್ಲಿ ನಡೆದಿದೆ. ಕಳ್ಳತನ ನಡೆಸಿದವರು ನಾಲ್ಕಾರು ಜನರ ತಂಡವಾಗಿರುವ ಶಂಕೆ ವ್ಯಕ್ತವಾಗಿದೆ.
ಶಿರಹಟ್ಟಿ ತಾಲೂಕಿನ ಬೆಳ್ಳಟ್ಟಿ, ಬನ್ನಿಕೊಪ್ಪ ಗ್ರಾಮಗಳು ಮತ್ತು ಮುಂಡರಗಿ ತಾಲೂಕಿನ ಬಾಗೇವಾಡಿ ಗ್ರಾಮದಲ್ಲಿ ಈ ಕೃತ್ಯ ನಡೆದಿದೆ. ಬೆಳ್ಳಟ್ಟಿ ಗ್ರಾಮದಲ್ಲಿ ಎಗ್ ರೈಸ್ ಅಂಗಡಿ ಮತ್ತು ಪಾನ್ ಶಾಪ್, ಬನ್ನಿಕೊಪ್ಪ ಗ್ರಾಮದಲ್ಲಿ ಎರಡು ಪಾನ್ ಶಾಪ್, ಹಾಗೂ ಬಾಗೇವಾಡಿ ಗ್ರಾಮದಲ್ಲಿ ಮನೆ ಕದ್ದಿರುವ ಘಟನೆಗಳು ನಡೆದಿವೆ. ಕಳ್ಳರು ಮನೆಮಾಲಿಕರಿಂದ 50 ಗ್ರಾಂ ಬಂಗಾರ ಆಭರಣ, ಸುಮಾರು 100 ಗ್ರಾಂ ಬೆಳ್ಳಿ ವಸ್ತುಗಳು, ಸೀರೆಗಳು ಮತ್ತು ಇತರೆ ವಸ್ತುಗಳನ್ನು ಕದ್ದೊಯ್ದಿದ್ದಾರೆ.
ಕಡಕೋಳ ಗ್ರಾಮದಲ್ಲಿ ಕಳ್ಳತನಕ್ಕೆ ಯತ್ನಿಸಿದರೂ, ಅದು ವಿಫಲವಾಗಿದೆ. ಘಟನೆಯ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶಿರಹಟ್ಟಿ ಮತ್ತು ಮುಂಡರಗಿ ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದು, ಕಳ್ಳರ ಪತ್ತೆಗೆ ತನಿಖೆ ಮುಂದುವರಿದಿದೆ.