ಯುವತಿಯೊಬ್ಬಳು ತನ್ನ ಪ್ರಿಯತಮನೊಂದಿಗೆ ಸರಸವಾಡುತ್ತಿದ್ದದ್ದನ್ನು ಅಪ್ರಾಪ್ತ ವಯಸ್ಸಿನ ತಮ್ಮ ನೋಡಿದನೆಂದು ಬರ್ಬರವಾಗಿ ಕೊಲೆ ಮಾಡಿರುವ ಭಯಾನಕ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ರಾಯ್ಬರೇಲಿ ಜಿಲ್ಲೆಯ ಭಡೋಖರ್ ಬಳಿಯ ಹಳ್ಳಿಯಲ್ಲಿ ಈ ಘಟನೆ ನಡೆದಿದೆ. ತಂದೆ ತಾಯಿಯು 18 ವರ್ಷದ ಮಗಳೊಂದಿಗೆ 12 ವರ್ಷದ ಮಗನನ್ನು ಬಿಟ್ಟು ಬೇರೆ ಊರಿಗೆ ಮದುವೆ ಕಾರ್ಯಕ್ರಮಕ್ಕೆ ತೆರಳಿದ್ದರು. ಆಗ ಯುವತಿ ತನ್ನ ಪ್ರಿಯಕರನನ್ನು ಮನೆಗೆ ಕರೆಸಿಕೊಂಡು ಸರಸವಾಡುವುದಕ್ಕೆ ಆರಂಭಿಸಿದ್ದಾಳೆ. ಇದನ್ನು ಕಂಡ ಆಕೆಯ ತಮ್ಮ ಈ ವಿಚಾರವನ್ನು ಅಪ್ಪ ಅಮ್ಮನಿಗೆ ಹೇಳುವುದಾಗಿ ಹೇಳಿದ್ದಾನೆ. ಆ ಹಿನ್ನೆಲೆ ಯುವತಿ ಪ್ರಿಯಕರನೊಂದಿಗೆ ಸೇರಿಕೊಂಡು ಮನೆಯಲ್ಲಿದ್ದ ಕುಡಗೋಲಿನಿಂದ ತಮ್ಮನ ಕುತ್ತಿಗೆಯನ್ನು ಕತ್ತರಿಸಿದ್ದಾಳೆ. ಬಾಲಕ ಕೊಲೆಯಾಗಿರುವ ವಿಚಾರವನ್ನು ಸ್ಥಳೀಯರು ಪೊಲೀಸರಿಗೆ ತಲುಪಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ವಿಚಾರಿಸಿದಾಗ ಯುವತಿ, ಅದೇ ಊರಿನ ಯುವಕನೊಬ್ಬ ಮನೆಗೆ ನುಗ್ಗಿ ದರೋಡೆಗೆ ಯತ್ನಿಸಿದ್ದಾಗಿ, ದರೋಡೆಗೆ ಏನೂ ಸಿಗದ ಕಾರಣ ತಮ್ಮನನ್ನು ಕೊಂದಿದ್ದಾಗಿ ಹೇಳಿದ್ದಾಳೆ. ಯುವತಿ ಹೇಳಿದ ಯುವಕನನ್ನು ಕರೆಸಿ ವಿಚಾರಣೆ ನಡೆಸಿದಾಗ ಆತ ಘಟನೆ ನಡೆದ ಸಮಯದಲ್ಲಿ ಲಕ್ನೋದಲ್ಲಿ ಇದ್ದದ್ದು ತಿಳಿದುಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿ ಹಾಗೂ ಆಕೆಯ ಪ್ರಿಯಕರನನ್ನು ಬಂಧಿಸಲಾಗಿದೆ.