ಆನ್ ಲೈನ್ ವಂಚಕರುಗಳಿಗೆ ಸಾಮಾಜಿಕ ಜಾಲತಾಣಗಳು ಪ್ರತ್ಯಕ್ಷವಾಗಿಯೂ ಅಥವಾ ಪರೋಕ್ಷವಾಗಿಯೊ ಬೆಂಬಲಿಸುತ್ತಿದೆ ಎಂದರೆ ತಪ್ಪಾಗಲಾರದು. ಭ್ರಷ್ಟರ ಬೇಟೆ ಪತ್ರಿಕೆಯ ಕಳೆದ ಸಂಚಿಕೆಗಳಲ್ಲಿ ಆನ್ಲೈನ್ನಲ್ಲಿ ಆಗುತ್ತಿರುವ ವಂಚನೆಗಳ ಬಗ್ಗೆ ತಿಳಿಸಿದ್ದೆವು. ಆನ್ಲೈನ್ ವಂಚಕರು ಆನ್ಲೈನ್ನಲ್ಲಿ ವಂಚನೆ ಮಾಡಬೇಕೆಂದರೆ ಮೊದಲಿಗೆ ಅವರುಗಳು ಸಾಮಾಜಿಕ ಜಾಲತಾಣಗಳಲ್ಲಿ ಜಾಹೀರಾತುಗಳನ್ನು ನೀಡುತ್ತಾರೆ. ಫೇಸ್ಬುಕ್, ಯೂಟ್ಯೂಬ್ ಮತ್ತು ಇನ್‌ಸ್ಟಗ್ರಾಮ್‌ನಲ್ಲಿ ಇತ್ತೀಚಿನ ದಿನಗಳಲ್ಲಿ ಜಾಹೀರಾತುಗಳು ರಾರಾಜಿಸುತ್ತಿವೆ. ಈ ರೀತಿ ಬರುವಂತಹ ಜಾಹೀರಾತುಗಳಲ್ಲಿ ಹಲವು ಜಾಹೀರಾತುಗಳು ವಂಚಕರಂದೆ ಆಗಿರುತ್ತದೆ. ಉದಾಹರಣೆಗೆ ಎಲೈಟ್(Elite) ಮೇಮಿ(Maime) ಹಾಗೂ ಇನ್ನೂ ಹಲವು ನಕಲಿ ಕಂಪನಿಗಳ ಹೆಸರುಗಳನ್ನು ಬಳಸಿ ಯೂಟ್ಯೂಬ್‌ನಲ್ಲಿ ದುಬಾರಿ ಬೆಲೆಯ ಮೊಬೈಲ್ ಕಡಿಮೆಬೆಲೆಗೆ ಮಾರಾಟಕ್ಕಿದೆ ಎಂದು ಪ್ರಕಟಿಸಿ ಮೊಬೈಲ್ ತಮ್ಮ ಮನೆಗೆ ಕಳುಹಿಸಿಕೊಡುತ್ತೇವೆ ಮೊದಲೇ ಹಣ ಪಾವತಿಸಿ ಎಂದು ಹಾಕಿಕೊಂಡಿರುತ್ತಾರೆ. ೨೦-೩೦ ಸಾವಿರದ ಮೊಬೈಲ್‌ಗಳು ಕೇವಲ ೨ ಅಥವಾ ೩ ಸಾವಿರಕ್ಕೆ ಸಿಗುತ್ತಿದೆ ಎಂದು ಅಮಾಯಕರು ಆಸೆಪಟ್ಟು ಹಣವನ್ನು ಪಾವತಿಸಿ ವಂಚಕರ ಬಲೆಗೆ ಬೀಳುತ್ತಾರೆ. ಮೊಬೈಲ್ ವಿಚಾರದಲ್ಲಿ ಮಾತ್ರವೇ ಅಲ್ಲದೆ ಹಲವು ರೀತಿಯ ಉತ್ಪನ್ನಗಳನ್ನು ಕಡಿಮೆ ಬೆಲೆಗೆ ಮಾರಾಟಕ್ಕೆ ಇಟ್ಟು ವಂಚಿಸುತ್ತಾರೆ. ಯೂಟ್ಯೂಬ್‌ನಲ್ಲಿ ಮಾತ್ರವೇ ಅಲ್ಲದೆ ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್‌ನಲ್ಲೂ ಸಹ ಈ ರೀತಿಯ ಜಾಹೀರಾತುಗಳು ಪ್ರಕಟವಾಗುತ್ತಲೇ ಇರುತ್ತವೆ ಹಾಗೂ ಇದರಿಂದ ಅಮಾಯಕ ಜನರು ಮೋಸ ಹೋಗುತ್ತಲೇ ಇದ್ದಾರೆ. ಬಸ್ಗಳಲ್ಲೇ ಪಾಸ್ ನೀಡುವುದಕ್ಕೆ ಗುರುತಿನ ಚೀಟಿಗಳನ್ನು ಕೇಳುತ್ತಾರೆ ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಜಾಹೀರಾತುಗಳನ್ನು ಪ್ರಕಟಿಸುವವರ ಯಾವುದೇ ಮಾಹಿತಿಯನ್ನು ಸಾಮಾಜಿಕ ಜಾಲತಾಣಗಳು ಪಡೆಯುವುದಿಲ್ಲ. ಅಚ್ಚರಿ ಎನಿಸಿದರೂ ಇದು ಸತ್ಯ. ಸಾಮಾಜಿಕ ಜಾಲತಾಣಗಳಲ್ಲಿ ರಾಜಕೀಯ ವಿಚಾರವನ್ನು ಹೊರತುಪಡಿಸಿ ಇನ್ಯಾವುದೇ ರೀತಿಯ ವಿಚಾರಗಳ ಬಗ್ಗೆ ತಮ್ಮ ಯಾವುದೇ ಮಾಹಿತಿಯನ್ನು ನೀಡದೆ ಜಾಹೀರಾತುಗಳನ್ನು ಪ್ರಕಟಿಸಿ ಕೊಳ್ಳಬಹುದು. ಇಂತಹ ನಿಯಮಗಳು ವಂಚಕರಿಗೆ ಬಂಪರ್ ಆಫರ್ ಇದ್ದಂತೆ. ರಾಜಕಾರಣಿಗಳ ಬಂಡವಾಳ ಬಯಲು ಮಾಡುವಂಥವರು ತಮ್ಮ ಮಾಹಿತಿಯನ್ನು ನೀಡಬೇಕು ಆದರೆ ಜನರನ್ನು ವಂಚಿಸುತ್ತಿರುವ ವಂಚಕರು ಮಾತ್ರ ಯಾವುದೇ ಮಾಹಿತಿ ನೀಡದೆ ರಾಜಾರೋಷವಾಗಿ ಜಾಹೀರಾತುಗಳನ್ನು ಪ್ರಕಟಿಸಬಹುದು ಎಂತಹ ವಿಪರ್ಯಾಸ ನೋಡಿ. ಒಂದು ಕಡೆ ದೇಶವನ್ನೇ ಕೊಳ್ಳೆಹೊಡೆಯುತ್ತಿರುವವರಿಗೆ ಸುರಕ್ಷತೆ ಇನ್ನೊಂದು ಕಡೆ ವಂಚಿಸುತ್ತಿರುವವರಿಗೆ ಸ್ವಾತಂತ್ರ. ಸಾಮಾಜಿಕ ಜಾಲತಾಣಗಳು ಜನರ ಮನರಂಜನೆಗಾಗಿ ಇರುವುದು ಎಂಬುದಕ್ಕಿಂತ ಹೆಚ್ಚಾಗಿ ಕಳ್ಳ ಕದೀಮರುಗಳ ಜನ್ಮಸ್ಥಳವಾಗಿದೆ. ಇದೇ ಉದ್ದೇಶಕ್ಕಾಗಿಯೇ ಹಲವು ದೇಶಗಳಲ್ಲಿ ಇಂತಹ ವೆಬ್ಸೆ ಟ್ಗಳನ್ನು ಬ್ಯಾನ್ ಮಾಡಿದ್ದಾರೆ. ಹಣದ ಆಸೆಗಾಗಿ ವಂಚಕರು ನೀಡುತ್ತಿರುವ ಜಾಹೀರಾತುಗಳನ್ನು ಪ್ರಕಟಿಸುತ್ತಿರುವ ಇಂತಹ ಸಾಮಾಜಿಕ ಜಾಲತಾಣಗಳಿಗೆ ನಮ್ಮದೊಂದು ಧಿಕ್ಕಾರ! ವಂಚಕರ ಜಾಹೀರಾತುಗಳಿಂದ ಮೋಸ ಹೋದ ಹಲವು ಜನರು ಲಕ್ಷಾಂತರ ರೂಪಾಯಿಗಳನ್ನು ಕಳೆದುಕೊಂಡಿದ್ದಾರೆ. ಈ ವಿಚಾರದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗಳು ಆಗುತ್ತಲೇ ಬರುತ್ತಿವೆ ಆದರೂ ಸಹ ಸಾಮಾಜಿಕ ಜಾಲತಾಣಗಳು ಯಾವುದೇ ರೀತಿಯ ನಿಯಮ ಬದಲಾವಣೆ ಮಾಡದಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಸಾಮಾಜಿಕ ವಲಯದಲ್ಲಿ ಸಾಮಾಜಿಕ ಜಾಲತಾಣಗಳು ಜನರ ಮನರಂಜನೆಗಾಗಿಯೊ ಅಥವಾ ಕಳ್ಳರಿಗಾಗಿಯೋ ಎಂಬುವ ಅನುಮಾನ ಮೂಡಿದೆ. ಮೈಕ್ರೋಸಾಫ್ಟ್ ಗ್ಲೋಬಲ್ ಟೆಕ್ ಸಪೋರ್ಟ್ ಸ್ಕ್ಯಾಮ್ ರಿಸರ್ಚ್ ರಿಪೋರ್ಟ್ನ ಪ್ರಕಾರ ೨೦೧೮ರಲ್ಲಿ ಭಾರತದಲ್ಲಿ ಶೇಕಡಾ ೨೩ ರಷ್ಟು ಜನ ಇಂತಹ ಆನ್ಲೈನ್ ವಂಚನೆಗೆ ಒಳಗಾಗಿದ್ದರು ಹಾಗೂ ೨೦೨೧ರಲ್ಲಿ ವಂಚನೆಗೆ ಒಳಗಾಗುವವರ ಸಂಖ್ಯೆ ಶೇಕಡಾ ೩೧ಕ್ಕೆ ಏರಿಕೆಯಾಗಿದೆ. ಈ ರೀತಿ ವಂಚನೆಗೆ ಒಳಗಾಗಿರುವವರಲ್ಲಿ ಶೇಕಡಾ ೭೩ರಷ್ಟು ಜನ ಪುರುಷರು ಹಾಗೂ ಇವರು ೨೪ರಿಂದ ೩೭ರ ವಯಸ್ಸಿನವರಾಗಿದ್ದಾರೆ. ಇದಿಷ್ಟು ಮೈಕ್ರೋಸಾಫ್ಟ್ ಗ್ಲೋಬಲ್ ಟೆಕ್ ಸಪೋರ್ಟ್ ಸ್ಕ್ಯಾಮ್ ರಿಸರ್ಚ್ ರಿಪೋರ್ಟ್ ನಲ್ಲಿ ದೂರು ನೀಡಿರುವವರ ಮಾಹಿತಿ ಮಾತ್ರ. ಇದನ್ನು ಹೊರತುಪಡಿಸಿ ನೇರವಾಗಿ ಸೈಬರ್ ಕ್ರೆöÊಂ ಪೊಲೀಸರ ಬಳಿ ದೂರು ನೀಡಿರುವವರು ಸಂಖ್ಯೆ ಇನ್ನೂ ಸಾಕಷ್ಟಿದೆ. ೨೦೦೯ ರಿಂದ ೨೦೧೯ರವರೆಗೆ ಭಾರತದಲ್ಲಿ ೧.೧೭ ಲಕ್ಷಪ್ರಕರಣಗಳು ದಾಖಲಾಗಿದ್ದು ಒಟ್ಟು ೬೧೫.೩೯ ಕೋಟಿಗಳಷ್ಟು ಹಣ ವಂಚನೆಯಾಗಿದೆ. ನಂತರದ ದಿನಗಳಲ್ಲಿ ಸಹ ವಂಚಕರ ಸಂಖ್ಯೆ ಹೆಚ್ಚಾಗುತ್ತಿದೆ ಹಾಗೂ ವಂಚನೆಗೊಳಗಾಗುತ್ತಿರುವ ಜನರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಇದರ ಬಗ್ಗೆ ಲೋಕಸಭೆಯಲ್ಲೂ ಸಹ ಚರ್ಚೆಯಾಗಿತ್ತು. ಇಷ್ಟೊಂದು ಪ್ರಮಾಣದಲ್ಲಿ ಹಣ ವಂಚನೆ ಯಾಗಿದ್ದರು ಸಹ ಇಂತಹ ವಂಚಕರಿಗೆ ಸರ್ಕಾರ ಕಡಿವಾಣ ಹಾಕುವಲ್ಲಿ ವಿಫಲವಾಗಿದೆ ಎಂದರೆ ತಪ್ಪಾಗಲಾರದು. ಆನ್ಲೈನ್ ವಂಚಕರ ಸಂಖ್ಯೆ ಕಡಿಮೆಯಾಗಬೇಕೆಂದರೆ ಸಾಮಾಜಿಕ ಜಾಲತಾಣಗಳು ನಕಲಿ ಜಾಹಿರಾತನ್ನು ನೀಡುವವರ ವಿರುದ್ಧ ಕಠಿಣ ನಿಯಮಗಳನ್ನು ತರಬೇಕು ಆಗ ಮಾತ್ರ ಆನ್ಲೈನ್ ವಂಚಕರಿಗೆ ಕಡಿವಾಣ ಹಾಕಲು ಸಾಧ್ಯ.
ಆನ್ಲೈನ್ ವಂಚಕರ ಬೆನ್ನು ಬಿದ್ದಿರುವ ಸೈಬರ್ ಕ್ರೈಮ್ ಪೊಲೀಸರು ಯಶಸ್ಸು ಕಾಣುತ್ತಿರುವುದು ಅರ್ಧಕ್ಕಿಂತ ಕಡಿಮೆ!
ಆನ್ಲೈನಲ್ಲಿ ವಂಚಕರು ಹೆಚ್ಚಾದಂತೆಲ್ಲ ಪ್ರಕರಣಗಳೂ ಹೆಚ್ಚಾಗುತ್ತಲೇ ಇವೆ. ಇಂತಹ ಪ್ರಕರಣಗಳನ್ನು ಬೇಧಿಸಲು ಸೈಬರ್ ಕ್ರೈಮ್ ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ನೂರು ಜನ ಮೋಸ ಹೋದವರಲ್ಲಿ ೫ ರಿಂದ ೧೦ ಜನರಿಗೆ ಮಾತ್ರ ಸೈಬರ್ ಕ್ರೈಮ್ ಪೊಲೀಸರು ನ್ಯಾಯ ಕೊಡಿಸಲು ಅಥವಾ ವಂಚಕರನ್ನು ಹಿಡಿದು ನೊಂದವರ ಹಣವನ್ನು ಹಿಂದಿರುಗಿಸಲು ಸಾಧ್ಯವಾಗುತ್ತಿದೆ. ಸಾಮಾಜಿಕ ಜಾಲತಾಣಗಳು ಮಾಡುತ್ತಿರುವ ಎಡವಟ್ಟಿನಿಂದ ಸೈಬರ್ ಕ್ರೈಮ್ ಪೊಲೀಸರಿಗೆ ದೊಡ್ಡ ತಲೆನೋವಾಗಿದೆ. ಏನಾದರೂ ಸೈಬರ್ ಕ್ರೈಮ್ ಪೋಲಿಸರಿದ್ದಾರೆ ಎಂಬುವ ಧೈರ್ಯದಿಂದ ಸಾಮಾನ್ಯ ಜನರು ಎಡವಟ್ಟು ಮಾಡಿಕೊಳ್ಳುವ ಮೊದಲು ತಮ್ಮ ಎಚ್ಚರಿಕೆಯಲ್ಲಿ ತಾವಿರಿ. ಒಮ್ಮೆ ಹಣ ಕಳೆದುಕೊಂಡ ಮೇಲೆ ಅದನ್ನು ಹಿಂಪಡೆಯುವುದು ಕಷ್ಟಸಾಧ್ಯ. ಆದಕಾರಣ ಪ್ರತಿ ಬಾರಿ ಹೇಳುವಾಗೆ ಈ ಬಾರಿಯೂ ಮತ್ತೊಮ್ಮೆ ಹೇಳುತ್ತಿದ್ದೇವೆ ಅವಶ್ಯಕತೆ ಇಲ್ಲದಂತಹ ಜಾಹೀರಾತುಗಳನ್ನು ಸುಮ್ಮನೆ ಒಮ್ಮೆ ನೋಡೋಣ ಎಂದು ಭಾವಿಸಿ ಕ್ಲಿಕ್ಕಿಸಿ ಮೋಸ ಹೋಗದಿರಿ.