ದೊಡ್ಡ ಕುರುಗೋಡು ಗ್ರಾಮದ ಅನಂತಕ್ಕ ಎಂಬ ವೃದ್ಧೆಯ ಶವಸಂಸ್ಕಾರಕ್ಕೆ ಆಕೆಯ ಪುತ್ರರು ₹40 ಲಕ್ಷಕ್ಕೆ ಬೇಡಿಕೆ ಇಟ್ಟಿರುವ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ.

ತಾಯಿ ಶವವನ್ನು ಜಮೀನಿನಲ್ಲಿ ತಂದೆಯ ಸಮಾಧಿ ಪಕ್ಕದಲ್ಲಿ ಹೂಳಲು ನಿರ್ಧರಿಸಿದ ಅನಂತಕ್ಕನ ನಾಲ್ವರು ಪುತ್ರಿಯರು, ಶವವನ್ನು ಸ್ವಂತ ಗ್ರಾಮಕ್ಕೆ ತಂದು ಹೊಲದಲ್ಲಿ ಇರಿಸಿದರು. ಆದರೆ, ಅವರ ಇಬ್ಬರು ಸಹೋದರರು ತಾಯಿಯ ಅಂತ್ಯಸಂಸ್ಕಾರಕ್ಕೆ ₹40 ಲಕ್ಷ ನೀಡುವಂತೆ ಪಟ್ಟು ಹಿಡಿದರು. ಇದರಿಂದಾಗಿ, ವೃದ್ಧೆಯ ಶವ ಹೊಲದಲ್ಲಿ ಗಂಟೆಗಳ ಕಾಲ ಬಿಸಿಲಿನಲ್ಲಿ ಉಳಿಯಬೇಕಾಯಿತು.

ಹೀನಾಯ ವರ್ತನೆಯನ್ನು ತಾಳಲಾರದ ಪುತ್ರಿಯರು ತಾಯಿಯ ಶವವನ್ನು ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಗೆ ಕೊಂಡೊಯ್ದು, ಸಹೋದರರ ವಿರುದ್ಧ ಪ್ರಕರಣ ದಾಖಲಿಸಲು ಒತ್ತಾಯಿಸಿದರು.

ಪರಿಹಾರದ ಹಣವೇ ವೈಮನಸ್ಸಿಗೆ ಕಾರಣ

ಅನಂತಕ್ಕ ಅವರ ಹೆಸರಿನಲ್ಲಿ ಇದ್ದ ಎರಡು ಎಕರೆ ಜಮೀನನ್ನು ಕೈಗಾರಿಕಾ ಬಳಕೆಗೆ ಕೆಐಎಡಿಬಿ ವಶಪಡಿಸಿಕೊಂಡು, ಇದಕ್ಕೆ ₹90 ಲಕ್ಷ ಪರಿಹಾರ ನೀಡಿತ್ತು. ಈ ಹಣವನ್ನು ಇಬ್ಬರು ಪುತ್ರರು ಸಮನಾಗಿ ಹಂಚಿಕೊಂಡಿದ್ದರು. ಆದರೆ, ನಾಲ್ವರು ಪುತ್ರಿಯರು ನ್ಯಾಯಾಲಯದ ಮೊರೆ ಹೋಗಿ ತಮ್ಮ ಪಾಲಿನ ಹಣವನ್ನು ಪಡೆದಿದ್ದರು. ಈಗ, ಅದೇ ಹಣವನ್ನು ವಾಪಸ್ ನೀಡುವಂತೆ ಇಬ್ಬರು ಪುತ್ರರು ಒತ್ತಾಯಿಸುತ್ತಿದ್ದರೆ, ಈ ಬಗ್ಗೆ ವೃದ್ಧೆಯ ಮೊಮ್ಮಗಳು ಶಾಂತಮ್ಮ ಆತಂಕ ವ್ಯಕ್ತಪಡಿಸಿದ್ದಾರೆ.

ಈ ವಿಷಯ ತಹಶೀಲ್ದಾರ್ ಮಹೇಶ್ ಎಸ್. ಪತ್ರಿ ಅವರ ಗಮನಕ್ಕೆ ಬಂದ ಕೂಡಲೇ ಅವರು ಸ್ಥಳಕ್ಕೆ ಆಗಮಿಸಿ ಮೃತರ ಎಲ್ಲಾ ಮಕ್ಕಳೊಂದಿಗೆ ಚರ್ಚಿಸಿ, ಅಂತಿಮವಾಗಿ ಶವಸಂಸ್ಕಾರಕ್ಕೆ ಅವಕಾಶ ಕಲ್ಪಿಸಿದರು.

Leave a Reply

Your email address will not be published. Required fields are marked *

error: Content is protected !!