
ಶೃಂಗೇರಿಯಲ್ಲಿ ಕುಡಿದ ಮತ್ತಿನಲ್ಲಿ ಒಬ್ಬ ವ್ಯಕ್ತಿ ಪೊಲೀಸರನ್ನೂ, ಆಂಬುಲೆನ್ಸ್ ಸಿಬ್ಬಂದಿಯನ್ನೂ ಕಂಗಾಲು ಗೊಳಿಸಿದ ಘಟನೆ ಗುರುವಾರ ರಾತ್ರಿ ನಡೆದಿದೆ. ಗುಂಪು ಘರ್ಷಣೆಯ ಸುಳ್ಳು ಕರೆ ನೀಡಿ ರಾತ್ರಿಯಿಡೀ ಪೊಲೀಸ್ ಸಿಬ್ಬಂದಿ ಹಾಗೂ ವೈದ್ಯಕೀಯ ತಂಡವನ್ನು ಹರಿಯಾಡಿಸಿದ ಈ ವ್ಯಕ್ತಿ ಕೊನೆಗೆ ಪೊಲೀಸರ ಬುದ್ಧಿವಾದಕ್ಕೆ ಗುರಿಯಾಗಿದ್ದಾನೆ.
ಸುಳ್ಳು ಕರೆಗಳಿಂದ ಪೊಲೀಸರು ಪರದಾಟ
ಹಗರಿಬೊಮ್ಮನಹಳ್ಳಿಯಿಂದ ಕೂಲಿ ಕೆಲಸಕ್ಕಾಗಿ ಶೃಂಗೇರಿಗೆ ಬಂದಿದ್ದ ಬಸವರಾಜ್ ಎಂಬ ಮದ್ಯವ್ಯಸನಿ, ರಾತ್ರಿಯಲ್ಲಿ ಪೊಲೀಸರಿಗೆ ಕರೆ ಮಾಡಿ, “ಶೃಂಗೇರಿ ಬಸ್ ನಿಲ್ದಾಣದಲ್ಲಿ ಭಾರೀ ಗುಂಪು ಘರ್ಷಣೆ ನಡೆದಿದೆ” ಎಂದು ತುರ್ತು ಮಾಹಿತಿ ನೀಡಿದ. ಇದನ್ನೇ ನಂಬಿದ ಪೊಲೀಸರು ಕೂಡಲೇ ಸ್ಥಳಕ್ಕೆ ದೌಡಾಯಿಸಿದರು.
ಇದೇ ಸಮಯದಲ್ಲಿ ಆಂಬುಲೆನ್ಸ್ ಸಿಬ್ಬಂದಿಗೂ ಬಸವರಾಜ್ ಕರೆ ಮಾಡಿ, “ಘರ್ಷಣೆಯಲ್ಲಿ ಹಲವರು ಗಾಯಗೊಂಡಿದ್ದಾರೆ, ತಕ್ಷಣವೇ ಬಂದು ಆಸ್ಪತ್ರೆಗೆ ಕರೆದೊಯ್ಯಿ” ಎಂದು ಸುಳ್ಳು ಮಾಹಿತಿ ನೀಡಿದ. ಇದರ ಪರಿಣಾಮವಾಗಿ ಆಂಬುಲೆನ್ಸ್ ಸಿಬ್ಬಂದಿಯೂ ತಕ್ಷಣವೇ ಘಟನಾ ಸ್ಥಳಕ್ಕೆ ಧಾವಿಸಿದರು. ಆದರೆ ಅಲ್ಲಿದ್ದದ್ದು ಬಿಕೋ ಎದೆಯಾದ ಬಸ್ ನಿಲ್ದಾಣ ಮಾತ್ರ!
“ನನ್ನನ್ನು ಹುಡುಕಿ!” – ಕುಡುಕನ ಸವಾಲ್
ಘಟನೆ ಬಗ್ಗೆ ಪೊಲೀಸರು ಮತ್ತೆ ಮತ್ತೆ ಬಸವರಾಜ್‌ಗೆ ಕರೆ ಮಾಡಿದರು. ಅದಕ್ಕೆ ಪ್ರತಿಯಾಗಿ ಕುಡುಕನು “ಭೂಮಿ ಮೇಲೆ, ಆಕಾಶದ ಕೆಳಗಿದ್ದೇನೆ! ಹಿಮ್ಮತ್ತಿದ್ದರೆ ನನ್ನನ್ನು ಹುಡುಕಿ!” ಎಂದು ತಿರುಗೇಟು ನೀಡಿದ. ಈ ಮಾತು ಕೇಳಿ ಪೊಲೀಸರ ಕೋಪ ಹೆಚ್ಚಾಗಿತ್ತು.
ಕೊನೆಗೂ ಕುಡುಕ ಪತ್ತೆ!
ಬಹುಶ್ರಮಪಟ್ಟು ಹುಡುಕಾಟ ನಡೆಸಿದ ಪೊಲೀಸರು ಕೊನೆಗೂ ಕುಡುಕ ಬಸವರಾಜ್‌ನನ್ನು ಪತ್ತೆಹಚ್ಚಿ, ಅವನಿಗೆ ಬುದ್ಧಿವಾದ ಹೇಳಿ ಬಿಡುಗಡೆ ಮಾಡಿದರು. ಆದರೆ ಈ ಅವಾಂತರದಿಂದ ಶೃಂಗೇರಿ ಪೊಲೀಸರಿಗೆ ಹಾಗೂ ಆಂಬುಲೆನ್ಸ್ ಸಿಬ್ಬಂದಿಗೆ ರಾತ್ರಿಯಿಡೀ ಪರದಾಟ ನಿಜವಾಗಿಯೂ ದೊಡ್ಡ ತಲೆನೋವಾಯಿತು!