ಬಾಗಲಕೋಟೆ ನಗರದಲ್ಲಿ ಶಾಸಕರು ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ ಆದರೆ ವಿದ್ಯಾರ್ಥಿಗಳು ಶಾಲೆ-ಕಾಲೇಜುಗಳಿಗೆ ಹೋಗಲು ಬಸ್ಸುಗಳ ವ್ಯವಸ್ಥೆ ಮಾತ್ರ ಮಾಡಿಲ್ಲವೆಂದು ವಿದ್ಯಾರ್ಥಿಗಳ ಮೂಲಕ ತಿಳಿದು ಬರುತ್ತಿದೆ. ಸಾಕಷ್ಟು ವರ್ಷಗಳಿಂದ ಬಸ್ಸುಗಳ ಕೊರತೆಯಿದೆ ಎಂದು ಪರದಾಡುತ್ತಿರುವ ವಿದ್ಯಾರ್ಥಿಗಳು,
ಈ ಸಮಸ್ಯೆಯನ್ನು ಪ್ರತಿನಿತ್ಯವೂ ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳು ನೋಡಿದರೂ ಸಹ ಇದನ್ನು ಬಗೆಹರಿಸುವ ಮನಸ್ಸು ಮಾತ್ರ ಯಾವೊಬ್ಬ ಕುರುಡ ಅಧಿಕಾರಿಯೂ ಮಾಡಿಲ್ಲ.
ಬೆಳಿಗ್ಗೆ 9 ಗಂಟೆಗೆ ನವನಗರ ಬಸ್ ನಿಲ್ದಾಣದಿಂದ ಎಲ್ಐಸಿ, ಅಂಬೇಡ್ಕರ್ ಭವನ, ಸೆಕ್ಟರ್ 45 ರ ಮಾರ್ಗವಾಗಿ ಹೋಗುವ ಬಸ್ಸು ಒಂದೇ ಇರುವ ಕಾರಣ ವಿದ್ಯಾರ್ಥಿಗಳಿಗೆ ಬಸ್ ನಲ್ಲಿ ನಿಲ್ಲಲು ಕೂಡ ಜಾಗವಿಲ್ಲದಂತಾಗಿದೆ. ಈ ಮಾರ್ಗವಾಗಿ ಐಟಿಐ ಸರ್ಕಾರಿ ಕಾಲೇಜು, ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು, ಆರ್.ಎಮ್.ಎಸ್.ಎ ಶಾಲೆ,ಮತ್ತು ಅರುಣೋದಯ ಪ್ಯಾರಾಮೆಡಿಕಲ್ ಕಾಲೇಜುಗಳು ಸೇರಿದಂತೆ ಸಾಕಷ್ಟು ಶಾಲೆ-ಕಾಲೇಜುಗಳಿವೆ. ಅಷ್ಟೇ ಅಲ್ಲದೆ ಬೇರೇ ಬೇರೆ ಹಳ್ಳಿಗಳಿಂದ ಸರಿ ಸುಮಾರು 500-600 ವಿದ್ಯಾರ್ಥಿಗಳು ಈ ಮಾರ್ಗವಾಗಿ ಸಂಚರಿಸುತ್ತಾರೆ. ಹಳ್ಳಿಗಳಿಂದ ಬಸ್ ನಿಲ್ದಾಣಕ್ಕೆ ಬಂದ ವಿದ್ಯಾರ್ಥಿಗಳಿಗೆ ಸರಿಯಾದ ಸಮಯಕ್ಕೆ ತಮ್ಮ ತಮ್ಮ ಶಾಲಾ ಕಾಲೇಜುಗಳಿಗೆ ತೆರಳಲು ಸರಿಯಾದ ಬಸ್ ಗಳ ವ್ಯವಸ್ಥೆ ಇಲ್ಲದಂತಾಗಿದೆ. ಇರುವ ಒಂದೇ ಬಸ್ ನಲ್ಲಿ ಜಾಗ ಸಾಲದೆ ಬಾಗಿಲಲ್ಲಿ ಜೋತು ಬಿದ್ದು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಷ್ಟೇ ಅಲ್ಲದೆ ವಿದ್ಯಾರ್ಥಿಗಳು ಬಿದ್ದು ಸಣ್ಣ ಪುಟ್ಟ ಗಾಯಗಳು ಆಗಿದ್ದು ಉಂಟು. ಇದೆಲ್ಲದರ ನಡುವೆ ವಿದ್ಯಾರ್ಥಿಗಳು ಸರಿಯಾದ ಸಮಯಕ್ಕೆ ತರಗತಿಗಳಿಗೆ ಹೋಗಲಾರದೆ ಆಟೋ ಮೂಲಕ ಹಾಗೂ ನಡೆದುಕೊಂಡು ಹೋಗುವಂತಹ ಪರಿಸ್ಥಿತಿ ಎದುರಾಗಿದೆ. ಹಾಗೂ ಶಿಕ್ಷಕರಿಂದ ಬೈಯಿಸಿಕೊಂಡು, ಹೊಡೆಸಿಕೊಂಡು ವಿದ್ಯಾರ್ಥಿಗಳನ್ನು ಹೊರಗೆ ನಿಲ್ಲಿಸಿ ಮನೆಗೆ ಕಳಿಸಿರುವ ಘಟನೆಗಳು ಕೂಡ ಸಾಕಷ್ಟಾಗಿವೆ. ಈ ಸಮಸ್ಯೆಯನ್ನು ಪರಿಹರಿಸುವಂತೆ ಕೆ.ಎಸ್.ಆರ್.ಟಿ.ಸಿ ಕಚೇರಿಗೆ ತೆರಳಿ ಮನವಿ ಪತ್ರದ ಮೂಲಕ ಮನವಿ ಸಲ್ಲಿಸಿದ್ದರು ಸಹ ಅಧಿಕಾರಿಗಳು ಕ್ಯಾರೇ ಎನ್ನುತ್ತಿಲ್ಲ.
ಹೀಗೆ ಮುಂದುವರೆದರೆ ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ.
ಈ ವರದಿಯನ್ನು ಗಮನಿಸಿಯಾದರೂ ಕೆ.ಎಸ್.ಆರ್.ಟಿ.ಸಿ. ಅಧಿಕಾರಿಗಳು ಎಚ್ಚೆತ್ತುಕೊಳ್ಳುತ್ತಾರಾ? ಅಥವಾ ವಿದ್ಯಾರ್ಥಿಗಳ ಪ್ರಾಣದ ಜೊತೆ ಚೆಲ್ಲಾಟವಾಡುತ್ತಾರಾ? ಕಾದು ನೋಡಬೇಕಿದೆ.

ವರದಿ: ವಿಶ್ವನಾಥ ಭಜಂತ್ರಿ

error: Content is protected !!