ಹುಣಸೂರು ವನ್ಯಜೀವಿ ಉಪವಿಭಾಗದ ಅಧಿಕಾರಿಗಳು ಮಂಗಳವಾರ ದಾಳಿ ನಡೆಸಿ ಪೊನ್ನಂಪೇಟೆ ತಾಲ್ಲೂಕಿನ ಟಿ. ಶೆಟ್ಟಿಗೇರಿ ಗ್ರಾಮದ ಕೆರೆ ಸಮೀಪ ಅಕ್ರಮವಾಗಿ ಹುಲಿ ಉಗುರು ಮಾರಾಟ ಮಾಡುತ್ತಿದ್ದ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಹುಲಿ ಯೋಜನೆಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ACF) ಲಕ್ಷ್ಮಿಕಾಂತ್ ಈ ಮಾಹಿತಿಯನ್ನು ತಿಳಿಸಿದ್ದಾರೆ.

ಕಾಫಿ ತೋಟದ ಬಳಿಯಲ್ಲಿಯೇ ಬಂಧನ
ಘಟನೆ ಟಿ. ಶೆಟ್ಟಿಗೇರಿಯ ಸಂರಕ್ಷಿತ ಅರಣ್ಯ ಪ್ರದೇಶದ ಬಳಿಯ ಗಣಪತಿ ಎಂಬುವರಿಗೆ ಸೇರಿದ ಕಾಫಿ ತೋಟದ ಸಮೀಪ ನಡೆದಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಮಾರುವಹಿವಾಟು ನಡೆಯುತ್ತಿರುವಾಗ ದಾಳಿ ನಡೆಸಿದರು. ಆರೋಪಿಗಳು ಮಾರುತಿ ವ್ಯಾನ್‌ನಲ್ಲಿ ಆಗಮಿಸಿದ್ದಾಗ, ಮಹಿಳೆಯೊಬ್ಬಳೊಂದಿಗೆ ಹುಲಿ ಉಗುರುಗಳ ವಹಿವಾಟು ನಡೆಸುತ್ತಿದ್ದ ವೇಳೆ ಅವರನ್ನು ವಶಕ್ಕೆ ಪಡೆಯಲಾಯಿತು.

12 ಹುಲಿ ಉಗುರು ಪತ್ತೆ
ಆರೋಪಿಗಳಿಂದ ವಶಪಡಿಸಿಕೊಂಡ ಡಬ್ಬಿಯನ್ನು ಪರಿಶೀಲಿಸಿದಾಗ ಅದರಲ್ಲಿ 12 ಹುಲಿ ಉಗುರುಗಳು ಇದ್ದವು. ಈ ಪ್ರಕರಣದಲ್ಲಿ ಟಿ. ಶೆಟ್ಟಿಗೇರಿ ಗ್ರಾಮದ ನಿವಾಸಿ ರಾಜಪ್ಪ ಬಿನ್ ನಂಜಪ್ಪ (63) ಮತ್ತು ಬೆಂಗಳೂರಿನ ಬನಶಂಕರಿ ಲೇಔಟ್ ನಿವಾಸಿ ಗೀತಾ (63) ಎಂಬುವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ.

ಮೂರುನೇ ಆರೋಪಿ ಪರಾರಿ – ಹುಲಿ ಚರ್ಮದ ಶಂಕೆ
ಈ ಘಟನೆಯಲ್ಲಿ ಮತ್ತೊಬ್ಬ ಆರೋಪಿ, ಶೆಟ್ಟಿಗೇರಿ ನಿವಾಸಿ ಸಂಜು, ಸ್ಥಳದಿಂದ ಪರಾರಿಯಾಗಿದ್ದು, ಆತನ ಬಳಿ ಹುಲಿ ಚರ್ಮ ಇರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆತನ ನಿವಾಸದಲ್ಲಿ ನಡೆಸಿದ ಶೋಧ ಕಾರ್ಯದಲ್ಲಿ ಕೆಲ ಮಾರಕಾಸ್ತ್ರಗಳು ಹಾಗೂ ಗುಂಡುಗಳು ಪತ್ತೆಯಾಗಿವೆ.

ಆರೋಪಿಗಳ ವಶಕ್ಕೆ – ವಾಹನ ವಶ
ಆರೋಪಿಗಳು ಬಳಸುತ್ತಿದ್ದ ಮಾರುತಿ ವ್ಯಾನ್‌ನ್ನು ವಶಪಡಿಸಿಕೊಂಡು, ವಶಕ್ಕೆ ಪಡೆದ ಎಲ್ಲ ವಸ್ತುಗಳನ್ನು ಶ್ರೀಮಂಗಲ ಅರಣ್ಯ ಇಲಾಖೆಗೆ ಹಸ್ತಾಂತರಿಸಲಾಗಿದೆ.

ಅರಣ್ಯ ಇಲಾಖೆ ಕಾರ್ಯಾಚರಣೆ
ಈ ಕಾರ್ಯಾಚರಣೆಯಲ್ಲಿ ACF ಲಕ್ಷ್ಮಿಕಾಂತ್, RFO ಸುಬ್ರಹ್ಮಣ್ಯ, ಪ್ರಮೋದ್ ಮನೋಹರ್, ಅರ್ಪಿತಾ, STPF ಪ್ಲಾಟೂನ್ 3 ಘಟಕದ RFO ಶಶಿಕುಮಾರ್, ಚಂದನ್, ಅರಣ್ಯ ಪಾಲಕರು ರಾಜು ಹಾಗೂ ನಾಗೇಂದ್ರ ಮಹದೇವ್ ಭಾಗವಹಿಸಿದ್ದರು. ಘಟನೆ ಕುರಿತಾಗಿ ಹೆಚ್ಚಿನ ತನಿಖೆ ಮುಂದುವರಿಯುತ್ತಿದೆ.

Leave a Reply

Your email address will not be published. Required fields are marked *

Related News

error: Content is protected !!