ಬೆಳಗಾವಿ: ತಾಯಿಯಿಲ್ಲದ ತಬ್ಬಲಿಯನ್ನ ಕಣ್ಣಲ್ಲಿ ಕಣ್ಣಿಟ್ಟು ಆರೈಕೆ ಮಾಡಬೇಕಿದ್ದ ಮಲತಾಯಿ ಮಗಳ ಹೊಟ್ಟೆಗೆ ಹೊಡೆದು ಹತ್ಯೆ ಮಾಡಿದ್ದ ಮಲತಾಯಿಯನ್ನು 8 ತಿಂಗಳ ಬಳಿಕ ಬೆಳಗಾವಿ ಪೊಲೀಸರು ಬಂಧಿಸಿದ್ದಾರೆ.ಬಂಧಿತ ಆರೋಪಿಯನ್ನು ಸಪ್ನಾ ನಾವಿ ಎಂದು ಗುರುತಿಸಲಾಗಿದೆ. ಆರೋಪಿ, 4 ವರ್ಷದ ಮಗಳ ಮೇಲೆ ಹಲ್ಲೆ ಮಾಡಿ ಹತ್ಯೆಗೈದು ತಾನೇನೂ ಮಾಡಿಲ್ಲ ಎಂಬಂತೆ ಇದ್ದಳು. ಮರಣೋತ್ತರ ಪರೀಕ್ಷೆಯಲ್ಲಿ ಮಹಿಳೆಯ ಕ್ರೌರ್ಯ ಬೆಳಕಿಗೆ ಬಂದಿದ್ದು, ಮಲತಾಯಿಯ ಅಸಲಿ ಬಣ್ಣ ಬಯಲಾಗಿದೆ.
ಸಮೃದ್ಧಿ ಎರಡು ವರ್ಷದ ಮಗುವಿದ್ದಾಗಲೇ ತಾಯಿ ತೀರಿಕೊಂಡಿದ್ದಳು. ಹೀಗಾಗಿ ಸಮೃದ್ಧಿ ತಂದೆ ರಾಯಣ್ಣ ಸಪ್ನಾಳನ್ನ ಎರಡನೇ ಮದುವೆ ಆಗಿದ್ದನು.
ಸಮೃದ್ಧಿ ತಂದೆ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾನೆ. ಇತ್ತ ಮಲತಾಯಿ ಕೆಎಸ್ಆರ್ಪಿ ಪೊಲೀಸ್ ಪೇದೆಯಾಗಿದ್ದಳು. ಎರಡನೇ ಮದುವೆ ಆದಾಗಿನಿಂದಲೂ ಮಗಳನ್ನ ಮಲತಾಯಿ ಸಪ್ನಾ ಆರೈಕೆ ಮಾಡುತ್ತಿದ್ದಳು.
2024ರ ಮೇ ತಿಂಗಳಲ್ಲಿ ಸಮೃದ್ಧಿ ರಾಯಣ್ಣ ನಾವಿ (4) ಸಾವನ್ನಪ್ಪಿದ್ದಳು. ಮಗುವಿನ ಅಜ್ಜ ಹಾಗೂ ಅಜ್ಜಿ ಸಪ್ನಾ ನಾವಿ ವಿರುದ್ಧ ಕೊಲೆ ಆರೋಪ ಮಾಡಿದ್ದರು. ಈ ಸಂಬಂಧ ಅಸಹಜ ಸಾವು ಪ್ರಕರಣ ದಾಖಲಾಗಿತ್ತು. ಬಳಿಕ ಮೃತಪಟ್ಟ ಮಗುವಿನ ಶವವನ್ನು ಬಿಮ್ಸ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿತ್ತು. ಇದಾದ ಬೆನ್ನಲ್ಲೇ ಸಪ್ನಾ ನಾವಿ ನಿರೀಕ್ಷಣಾ ಜಾಮೀನು ಪಡೆದಿದ್ದಳು.
ಸದ್ಯ ಮರಣೋತ್ತರ ಪರೀಕ್ಷೆ ವರದಿಯಲ್ಲಿ ಮಗುವಿನ ಹೊಟ್ಟೆಗೆ ಹೊಡೆದು, ಅಥವಾ ಒದ್ದು ಗಾಯಗೊಳಿಸಿ ಕೊಲೆ ಎಂದು ಸಾಬೀತಾಗಿದೆ. ಈ ಹಿನ್ನೆಲೆ ನಿರೀಕ್ಷಣಾ ಜಾಮೀನನ್ನು ರದ್ದು ಮಾಡುವಂತೆ ಪೊಲೀಸರು ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ಜಾಮೀನು ರದ್ದಾಗುತ್ತಿದ್ದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.