ಅಕ್ಟೋಬರ್ ೬ರಂದು ನಡೆದಿದ್ದ ಈ ಕೊಲೆಯ ಹಿಂದಿನ ರಹಸ್ಯ ಈಗ ಬಯಲಾಗಿದೆ. ಮಲ್ಲವ್ವ ಜೀವಪ್ಪ ಕಮತೆ ಕೊಲೆಯಾದ ವೃದ್ಧೆ. ಕೊಲೆ ಮಾಡಿದವನು ಶಂಕರ್ ರಾಮಪ್ಪ ಪಾಟೀಲ್. ಅವನಿಗೆ ಸಹಾಯ ಮಾಡಿದ್ದು ಗೆಳೆಯ ಮಹೇಶ ಸದಾಶಿವ ಕಬಾಡಗೆ.
ಶಂಕರ ಪಾಟೀಲ್ ಕಷ್ಟ ಕಾಲದಲ್ಲಿ ವೃದ್ಧೆ ಮಲ್ಲವ್ವ ಅವರ ಕೈಕಾಲು ಹಿಡಿದು ೫೦,೦೦೦ ರೂ. ಸಾಲ ಪಡದಿದ್ದ. ಆದರೆ, ಅದನ್ನು ಹಿಂದಿರುಗಿಸಲೇ ಇಲ್ಲ. ವೃದ್ಧೆ ಆಗಾಗ ಕೇಳಲು ಶುರು ಮಾಡಿದ್ದರು. ಇದಕ್ಕೆ ಪ್ರತಿಯಾಗಿ ಹಣ ಹೊಂದಿಸುವ ಬದಲು ಅಜ್ಜಿಯನ್ನೇ ಮುಗಿಸಲು ಸಂಚು ಹೂಡಿದ.
ತನ್ನ ಗೆಳೆಯನಾಗಿರುವ ಮಹೇಶ ಸದಾಶಿವ ಕಬಾಡಗೆಯನ್ನು ಸೇರಿಸಿಕೊಂಡು ಅಜ್ಜಿಯ ಕುತ್ತಿಗೆಗೆ ಸೀರೆ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದ. ಇಷ್ಟಕ್ಕೇ ತೃಪ್ತರಾಗದ ಈ ದುಷ್ಟರು ಮಲ್ಲವ್ವ ಅವರ ಮೈಮೇಲಿದ್ದ ಚಿನ್ನಾಭರಣಗಳನ್ನು ಕೂಡಾ ದೋಚಿದ್ದರು. ಸುಮಾರು ೧ ಲಕ್ಷ ಮೌಲ್ಯದ ಬಂಗಾರದ ಸರವನ್ನು ಅವರು ಕಿತ್ತುಕೊಂಡಿದ್ದರು.
ಆವತ್ತು ಕೊಲೆ ಮಾಡಿದವರು ಯಾರು ಎನ್ನುವ ಪ್ರಶ್ನೆ ಪೊಲೀಸರನ್ನು ಕಾಡಿತ್ತು. ಅಂತಿಮವಾಗಿ ಈ ಇಬ್ಬರ ಬಂಧನದೊಂದಿಗೆ ನಿಜ ಸಂಗತಿ ಹೊರಬಿದ್ದಿದೆ. ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.