ಚಿಂಚೋಳಿ ಬಸ್ ನಿಲ್ದಾಣದಿಂದ ಕಳ್ಳತನವಾಗಿದ್ದ ಬಸ್ಸನ್ನು ಘಟನೆ ನಡೆದ 13 ಗಂಟೆಯಲ್ಲಿ ಚಿಂಚೋಳಿ ಠಾಣೆ ಪೊಲೀಸರು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಬೆಳಗ್ಗೆ ನುಸುಕಿನ ಜಾವ 3.30 ಸುಮಾರಿಗೆ ಕಲಬುರಗಿ ಜಿಲ್ಲೆ ಚಿಂಚೋಳ್ಳಿ ಪಟ್ಟಣದಲ್ಲಿರುವ ಬಸ್ ನಿಲ್ದಾಣದಿಂದ ಬೀದರ್ ಡಿಪೋದ KA38F971 ಸಂಖ್ಯೆಯ ಬಸ್ ಕಳ್ಳತನಾಗಿತ್ತು. ಈ ಬಗ್ಗೆ ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಳ್ಳತನವಾಗಿರುವ ಬಸ್ಸಿಗಾಗಿ ಹುಡುಕಾಟ ನಡೆಸಿದ್ದು, ತೆಲಂಗಾಣ ರಾಜ್ಯದ ತಾಂಡೂರು ತಾಲೂಕಿನ ಭೂ ಕೈಲಾಸ ತಾಂಡಾದಲ್ಲಿ ಬಸ್ ಪತ್ತೆಯಾಗಿದೆ.
ಸ್ವಾರಸ್ಯವೆಂದರೆ, ಬೀಟ್ ಕರ್ತವ್ಯದಲ್ಲಿದ್ದ ಪೊಲೀಸರ ಮುಂದೆಯೇ ಖದೀಮರು ಬಸ್ಸನ್ನು ಚಲಾಯಿಸಿಕೊಂಡು ಹೋಗಿದ್ದರು. ಆದರೆ ಸರ್ಕಾರಿ ಬಸ್ಸು ಆದ್ದರಿಂದ ಅನುಮಾನ ವ್ಯಕ್ತಪಡಿಸದ ಪೊಲೀಸರು ಸುಮ್ಮನಾಗಿದ್ದರು. ಖದೀಮರು ಬಸ್ಸನ್ನು ತಾಂಡಾದ ಹೊರವಲಯದಲ್ಲಿ ಬಿಟ್ಟು ಪರಾರಿಯಾಗಿದ್ದಾರೆ. ಸದ್ಯ ಬಸ್ ಇರೋದನ್ನು ಪತ್ತೆ ಮಾಡಿರುವ ಚಿಂಚೋಳಿ ಪೊಲೀಸರು, ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.