
ಬಾಳೆಹೊನ್ನೂರು: ಲಾರಿಯನ್ನು ಅಡ್ಡಗಟ್ಟಿ ಹಣಕ್ಕಾಗಿ ಬೇಡಿಕೆ ಇಟ್ಟು, ಚಾಲಕನಿಗೆ ಹಲ್ಲೆ ಮಾಡಿದ ಆರೋಪದ ಮೇಲೆ ಶೃಂಗೇರಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಸುದೀಪ್ ಹಾಗೂ ಮೆಣಸೆ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಮಂಜು ಅವರನ್ನು ಬಾಳೆಹೊನ್ನೂರು ಪೊಲೀಸರು ಬಂಧಿಸಿ, ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.
ಈ ಘಟನೆ ಬಾಳೆಹೊನ್ನೂರು ಸಮೀಪ ಹರಿಗೆ ಎಂಬಲ್ಲಿ ನಡೆದಿದೆ. ಕಾಫಿ ಸಾಗಣಿಕೆ ಮಾಡುತ್ತಿದ್ದ ಲಾರಿಯನ್ನು ಸರ್ಕಾರಿ ವಾಹನದಲ್ಲಿ ಬಂದ ಇಬ್ಬರು ಆರೋಪಿಗಳು ತಡೆದು ನಿಲ್ಲಿಸಿದ್ದಾರೆ. ಬಳಿಕ, ಲಾರಿಯಲ್ಲಿದ್ದ ಕಾಫಿ ಸರಕು ಸಂಬಂಧಿತ ಬಿಲ್ ನೀಡಲು ಚಾಲಕ ಆತೀಫ್ ಮುಂದಾದಾಗ, ಅವರು ₹50,000 ಲಂಚ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಲಾಗಿದೆ. ಹಣ ನೀಡಲು ನಿರಾಕರಿಸಿದ ಆತೀಫ್ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಲಾಗಿದೆ.
ಘಟನೆ ಸಂಬಂಧ, ಆತೀಫ್ ಅವರ ಸ್ನೇಹಿತ ಹಾಗೂ ಹೇರೂರು ಗ್ರಾಮ ಪಂಚಾಯಿತಿ ಸದಸ್ಯ ಅಮ್ಜದ್ ಪೊಲೀಸ್ ದೂರು ನೀಡಿದ್ದಾರೆ. ‘ಇದು ಅಕ್ರಮವೆಂದು ಹೇಳಿದ ನನಗೂ ನಿಂದಿಸಿ, ಹಲ್ಲೆ ನಡೆಸಲಾಯಿತು. ಅಲ್ಲದೆ ಜೀವ ಬೆದರಿಕೆ ಹಾಕಲಾಯಿತು. ಸರ್ಕಾರಿ ವಾಹನ ದುರುಪಯೋಗ ಮಾಡಲಾಗಿದೆ’ ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು, ಸುದೀಪ್ ಮತ್ತು ಮಂಜು ಅವರನ್ನು ಬಂಧಿಸಿ ತಕ್ಷಣವೇ ಠಾಣಾ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.
ಈ ಘಟನೆಯು ಸ್ಥಳೀಯ ಮಟ್ಟದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಜನತೆ ಆಗ್ರಹಿಸುತ್ತಿದ್ದಾರೆ.