ಉತ್ತರ ಪ್ರದೇಶದ ಉನ್ನಾವೋ ಪ್ರಾಂತ್ಯದ ಪ್ರಾಪರ್ಟಿ ಡೀಲರ್ ಒಬ್ಬರ ಹುಟ್ಟುಹಬ್ಬವನ್ನು ಆಯೋಜಿಸಲಾಗಿದ್ದು, ಈ ಸಂದರ್ಭದಲ್ಲಿ ನೃತ್ಯ ಮಾಡಲು ಮೂವರು ಯುವತಿಯರನ್ನು ಕರೆಯಿಸಲಾಗಿತ್ತು. ಈ ವೇಳೆ ಪಾರ್ಟಿಯಲ್ಲಿದ್ದವರು ಸಂಪೂರ್ಣವಾಗಿ ಪಾನಮತ್ತರಾಗಿದ್ದರು ಎನ್ನಲಾಗಿದೆ. ಮೂವರು ಯುವತಿಯರ ಪೈಕಿ ಒಬ್ಬರನ್ನು ಕಾರಿನಲ್ಲಿ ಅಪಹರಿಸಿದ 6 ಮಂದಿಯ ಗುಂಪು, ಸಮೀಪದ ಅರಣ್ಯ ಪ್ರದೇಶಕ್ಕೆ ಎಳೆದೊಯ್ದು ಅತ್ಯಾಚಾರ ಎಸಗಿದ್ದಾರೆ. ಅತ್ಯಾಚಾರಕ್ಕೆ ಒಳಗಾದ ಯುವತಿ ಮೊದಲಿಗೆ ಜಾಜ್ಮು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಅಲ್ಲಿರುವ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದ ಕಾರಣ ಬಳಿಕ ಉನ್ನಾವೋ ಸದರ್ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಇದೀಗ ಅತ್ಯಾಚಾರಕ್ಕೆ ಒಳಗಾದ ಯುವತಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪರಾರಿಯಾಗಿರುವ ಆರು ಮಂದಿ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.