ಚಿಕನ್ ರೋಲ್ ಕೊಟ್ಟಿಲ್ಲ ಎಂದು ಹೋಟೆಲ್ ಸಿಬ್ಬಂದಿ ಇದ್ದ ರೂಮ್ಗೆ ಬೆಂಕಿ ಇಟ್ಟು ಕೊಲ್ಲಲು ಯತ್ನಿಸಿರುವ ಘಟನೆ ನಗರದ ಹನುಮಂತನಗರ ಠಾಣಾ ವ್ಯಾಪ್ತಿಯಲ್ಲಿ ಸೋಮವಾರ ರಾತ್ರಿ ನಡೆದಿದೆ. ಕೃತ್ಯ ಎಸಗಿದ ಮೂವರ ಪೈಕಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ದೇವರಾಜ್ ಹಾಗೂ ಗಣೇಶ ಬಂಧಿತ ಆರೋಪಿಗಳಾಗಿದ್ದು, ಮತ್ತೊಬ್ಬ ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಹನುಮಂತನಗರದ ಕುಮಾರ್ ಹೋಟೆಲ್ಗೆ ದೇವರಾಜ್ ಮತ್ತು ಸಹಚರರು, ಚಿಕನ್ ರೋಲ್ಗಾಗಿ ತೆರಳಿದ್ದರು. ಈ ವೇಳೆ ಚಿಕನ್ ರೋಲ್ ಇಲ್ಲ, ಹೋಟೆಲ್ ಸಮಯ ಮುಗಿದಿದೆ, ಕ್ಲೋಸ್ ಮಾಡಿದ್ದೇವೆ ಎಂದು ಸಿಬ್ಬಂದಿ ಹೇಳಿದ್ದಾರೆ. ಇದರಿಂದ ಕೋಪಗೊಂಡ ದೇವರಾಜ್ ಸೇರಿ ಮೂವರು ಗಲಾಟೆ ಮಾಡಿದ್ದಾರೆ. ಕುಡಿದ ಅಮಲಿನಲ್ಲಿ ಕೂಗಾಡುತ್ತಿದ್ದವರನ್ನು ಸಿಬ್ಬಂದಿ ಥಳಿಸಿ ಕಳುಹಿಸಿದ್ದಾರೆ.
ಏಟು ತಿಂದ ಬಳಿಕ ದೇವರಾಜ್ ಮತ್ತು ಸಹಚರರು, ದೇವೇಗೌಡ ಪೆಟ್ರೋಲ್ ಬಂಕ್ಗೆ ಹೋಗಿ ೮ ಲೀಟರ್ ಪೆಟ್ರೋಲ್ ಖರೀದಿ ಮಾಡಿದ್ದಾರೆ. ನಂತರ ಕುಮಾರ್ ಹೋಟೆಲ್ ಪಕ್ಕದಲ್ಲೇ ಇರುವ ಹೋಟೆಲ್ ಸಿಬ್ಬಂದಿಯ ರೂಮ್ ಬಳಿ ತೆರಳಿ ಬಾಗಿಲು, ಕಿಟಕಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಅದೃಷ್ಟವಶಾತ್ ರೂಮ್ನಲ್ಲಿ ಇದ್ದ ಹೋಟೆಲ್ ಸಿಬ್ಬಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಬಗ್ಗೆ ಹನುಮಂತನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.