ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನೇ ಗುಂಡಿಕ್ಕಿ ಕೊಂದು, ಬಳಿಕ ತಾನೇ ಪೊಲೀಸರಿಗೆ ಶರಣಾಗಿರುವ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಬೇಟೋಳಿ ಗ್ರಾಮದಲ್ಲಿ ನಡೆದಿದೆ.
ಶಿಲ್ಪಾ ಸೀತಮ್ಮ (40) ಮೃತ ದುರ್ದೈವಿ, ಪತಿ ನಾಯಕಂಡ ಬೋಪಣ್ಣ (45) ಗುಂಡಿಕ್ಕಿ ಕೊಂದ ಆರೋಪಿ. ತನ್ನ ಪತ್ನಿ ಫೋನ್ನಲ್ಲಿ ಬೇರೆಯವರೊಂದಿಗೆ ಮಾತನಾಡುತ್ತಿದ್ದುದ್ದಕ್ಕೆ ಆಕ್ಷೇಪಿಸಿದ ನಂತರ ಇಬ್ಬರ ನಡುವೆ ಜಗಳವಾಗಿ ಪತಿ ಗುಂಡಿಕ್ಕಿ ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
17 ವರ್ಷದ ಹಿಂದೆ ಪರಸ್ಪರ ಪ್ರೀತಿಸಿ ಇಬ್ಬರು ಮದುವೆಯಾಗಿದ್ದರು, ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಅಲ್ಲದೇ ಬೋಪಣ್ಣ ವಿರಾಜಪೇಟೆ ತಾಲ್ಲೂಕಿನ ಅರ್ಜಿ ಗ್ರಾಮದಲ್ಲಿ ಸರ್ವಿಸ್ ಸ್ಟೇಷನ್ ಹಾಗೂ ಕಾಫಿ ತೋಟದ ಮಾಲೀಕನಾಗಿದ್ದ.
ಶಿಲ್ಪಾ ಸೀತಮ್ಮ 2012 ರಿಂದ 2017ರ ವರೆಗೆ ಬೇಟೋಳಿ ಗ್ರಾಮ ಪಂಚಾಯತಿ ಸದಸ್ಯರಾಗಿ ಸೇವೆಸಲಿಸಿದ್ದರು. ಶುಕ್ರವಾರ (ಜು.19) ರಾತ್ರಿ ಬೇರೆಯವರೊಂದಿಗೆ ಫೋನ್ನಲ್ಲಿ ಮಾತನಾಡುತ್ತಿದ್ದರು. ಇದೇ ವಿಚಾರವಾಗಿ ಇಬ್ಬರ ನಡುವೆ ಗಲಾಟೆ ನಡೆದಿತ್ತು. ಶನಿವಾರ ಬೆಳಗ್ಗೆಯೂ ಪತಿ ಆಕ್ಷೇಪಿಸಿದ್ದ, ಇದರಿಂದ ಇಬ್ಬರ ನಡುವೆ ಜಗಳ ಏರ್ಪಟ್ಟಿತ್ತು, ಕೊನೆಗೆ ಜಗಳ ವಿಕೋಪಕ್ಕೆ ತಿರುಗಿ ಪತಿಯೇ ಗುಂಡಿಕ್ಕಿ ಕೊಂದಿದ್ದಾನೆ. ಹತ್ಯೆ ಮಾಡಿ ಪೊಲೀಸರಿಗೆ ತಾನೇ ಶರಣಾಗಿದ್ದಾನೆ. ಬಳಿಕ ಘಟನಾ ಸ್ಥಳಕ್ಕೆ ವಿರಾಜಪೇಟೆ ಪೋಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.