ಕಾಡಂಚಿನ ಹೆಡಿಯಾಲ ಸಮೀಪದ ಅಳಲಹಳ್ಳಿ ಚೈನ್ ಗೇಟ್ ಬಳಿ ಘಟನೆ ನಂಜನಗೂಡು: ಅರಣ್ಯ ಇಲಾಖೆ ಸಿಬ್ಬಂದಿಗಳ ಎಡವಟ್ಟಿಗೆ ಜೆಸಿಬಿ ಯಂತ್ರವೊಂದು ಸುಟ್ಟು ಕರಕಲಾಗಿರುವ ಘಟನೆ ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಹೆಡಿಯಾಲ ಸಮೀಪದ ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಅರಣ್ಯ ಪ್ರದೇಶದ ಚೈನ್ ಗೇಟ್ ಬಳಿ ನಡೆದಿದೆ. ಐತಿಹಾಸಿಕ ಧಾರ್ಮಿಕ ಕ್ಷೇತ್ರ ಶ್ರೀ ಬೇಲದಕುಪ್ಪೆ ಮಹದೇಶ್ವರ ದೇವಾಲಯಕ್ಕೆ ತೆರಳುವ ಮಾರ್ಗದಲ್ಲಿ ಘಟನೆ ನಡೆದಿದೆ. ಆನೆಕಂದಕ ನಿರ್ಮಾಣ ಕಾಮಗಾರಿ ನಡೆಸಲು ಜೆಸಿಬಿ ಯಂತ್ರ ಬಳಸಲಾಗುತ್ತಿದ್ದು ಅನಾರೋಗ್ಯದ ನಿಮಿತ್ತ ಜೆಸಿಬಿ ಚಾಲಕ ಜೆಸಿಬಿ ನಿಲ್ಲಿಸಿ ಆಸ್ಪತ್ರೆಗೆ ತೆರಳಿದ್ದರೆಂದು ಹೇಳಲಾಗಿದೆ. ಈ ವೇಳೆ ಕುರುಚಲು ಸಸ್ಯಗಳ ನಿರ್ಮೂಲನೆಗಾಗಿ ಅರಣ್ಯ ಇಲಾಖೆ ಸಿಬ್ಬಂದಿಗಳು ಬೆಂಕಿ ಹಚ್ಚಿದ್ದಾರೆ. ಕುರುಚಲು ಸಸ್ಯಗಳಿಗೆ ಹಚ್ಚಿದ್ದ ಬೆಂಕಿ ಪಸರಿಸಿದ ಹಿನ್ನೆಲೆ ಸಮೀಪದಲ್ಲಿದ್ದ ಜೆಸಿಬಿ ಯಂತ್ರದ ಟಯರ್ ಮತ್ತು ಎಂಜಿನ್ ಗೆ ತಗುಲಿದೆ. ಬೆಂಕಿ ತಗುಲಿದ ಕೆಲವೇ ಸಮಯದಲ್ಲಿ ಜೆಸಿಬಿ ಯಂತ್ರ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಸಂಪೂರ್ಣ ಸುಟ್ಟು ಕರುಕಲಾಗಿದೆ.
ಅರಣ್ಯ ಇಲಾಖೆಯು ಅರಣ್ಯ ಪ್ರದೇಶಕ್ಕೆ ಪ್ರವೇಶಿಸಲು ನಿರ್ಭಂದ ಹೇರಿರುವ ಕಾರಣ ಸ್ಥಳಕ್ಕೆ ತುರ್ತಾಗಿ ಅಗ್ನಿಶಾಮಕ ವಾಹನವೂ ಸಹ ತಲುಪಲು ಸಾಧ್ಯವಾಗಿಲ್ಲವೆಂದು ಹೇಳಲಾಗಿದೆ. ಒಟ್ಟಾರೆ ಅರಣ್ಯ ಇಲಾಖೆ ಸಿಬ್ಬಂದಿಗಳ ಎಡವಟ್ಟಿಗೆ ಖಾಸಗಿ ವ್ಯಕ್ತಿಗೆ ಸೇರಿದ ಲಕ್ಷಾಂತರ ರೂಪಾಯಿಯ ಜೆಸಿಬಿ ಯಂತ್ರ ಸುಟ್ಟುಕರಕಲಾಗಿ ಕೇವಲ ಅವಶೇಷವಾಗಿ ಮಾತ್ರ ಉಳಿದಿದೆ. ವರದಿ: ಮೋಹನ್

Leave a Reply

Your email address will not be published. Required fields are marked *

error: Content is protected !!