ದೇಶದಲ್ಲಿ ಪ್ರೀತಿಸಿದ ಹುಡುಗಿಯ ದೇಹವನ್ನೇ ತುಂಡರಿಸುವ ಭೀಕರ ಕೃತ್ಯವು ಸಮೂಹಸನ್ನಿಯಂತಾಗಿದೆ. ದೆಹಲಿಯಲ್ಲಿ ಲಿವ್ ಇನ್ ರಿಲೇಷನ್ಶಿಪ್ನಲ್ಲಿದ್ದ ಶ್ರದ್ಧಾ ವಾಳ್ಕರ್ ದೇಹವನ್ನು ಅಫ್ತಾಬ್ ಅಮೀನ್ ಪೂನಾವಾಲಾ ಎಂಬ ದುರುಳನು 35 ಭಾಗಗಳಾಗಿ ಕತ್ತರಿಸಿದ ಪ್ರಕರಣ ದೇಶಾದ್ಯಂತ ಸುದ್ದಿಯಾದ ಬೆನ್ನಲ್ಲೇ ಉತ್ತರ ಪ್ರದೇಶದಲ್ಲೂ ವ್ಯಕ್ತಿಯೊಬ್ಬ ಮಾಜಿ ಪ್ರೇಯಸಿಯ ದೇಹವನ್ನು ಆರು ಭಾಗಗಳಾಗಿ ತುಂಡರಿಸಿ ಹತ್ಯೆಗೈದಿದ್ದಾನೆ.
ಪೊಲೀಸರು ಈತನನ್ನು ಬಂಧಿಸಿದ್ದು, ಕೃತ್ಯದ ಸ್ಥಳಕ್ಕೆ ಕರೆದುಕೊಂಡು ಹೋದಾಗ ಆತನ ಮೇಲೆ ಗುಂಡು ಹಾರಿಸಿದ್ದಾರೆ. ಆತನಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.
ಅಜಮ್ಗಢ ಜಿಲ್ಲೆಯ ಪಶ್ಚಿಮಿ ಗ್ರಾಮದಲ್ಲಿ ಪ್ರಿನ್ಸ್ ಯಾದವ್ ಎಂಬಾತನು ಅನುರಾಧಾ ಎಂಬ ಯುವತಿಯನ್ನು ಹತ್ಯೆಗೈದಿದ್ದಾನೆ. ನವೆಂಬರ್ 9ರಂದು ಬೈಕ್ನಲ್ಲಿ ಅನುರಾಧಾಳನ್ನು ಕರೆದುಕೊಂಡ ಯಾದವ್, ಗೆಳೆಯನ ಜತೆಗೂಡಿ ಆಕೆಯನ್ನು ನಿರ್ಜನ ಪ್ರದೇಶದಲ್ಲಿ ಹತ್ಯೆಗೈದಿದ್ದಾನೆ. ಬಳಿಕ ಇಬ್ಬರೂ ಸೇರಿ ಒಂದು ಚೀಲದಲ್ಲಿ ಆಕೆಯ ದೇಹದ ಭಾಗಗಳನ್ನು ಪ್ಯಾಕ್ ಮಾಡಿ ಕೆರೆಗೆ ಎಸೆದಿದ್ದಾರೆ. ನವೆಂಬರ್ 15ರಂದು ಗ್ರಾಮಸ್ಥರಿಗೆ ಶವ ಸಿಕ್ಕಿದ್ದು, ಇದಾದ ನಂತರ ಪ್ರಕರಣ ಸುದ್ದಿಯಾಗಿದೆ.
ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಸಿದ ಪೊಲೀಸರು ಪ್ರಿನ್ಸ್ ಯಾದವ್ನನ್ನು ಬಂಧಿಸಿ, ಕೃತ್ಯ ಎಸಗಿದ ಸ್ಥಳಕ್ಕೆ ಅವನನ್ನು ಕರೆದೊಯ್ದಿದ್ದಾರೆ. ಇದೇ ವೇಳೆ ಆತ ತಪ್ಪಿಸಿಕೊಂಡು ಹೋಗಲು ಯತ್ನಿಸಿದಾಗ ಪೊಲೀಸರು ಗುಂಡು ಹಾರಿಸಿದ್ದಾರೆ. ಸದ್ಯ, ಆತನಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.