ಶಿವಮೊಗ್ಗ: ರಸ್ತೆ ಬದಿಯಲ್ಲಿ ನವಜಾತ ಶಿಶುವನ್ನು ಬಿಟ್ಟು ಹೋಗುವ ಘಟನೆ ಶಿವಮೊಗ್ಗ ನಗರದ ಶ್ರೀರಾಮಪುರದಲ್ಲಿ ನಡೆದಿದೆ.
ಗುರುವಾರ (ಜನವರಿ.10) ರಾತ್ರಿ ಶಿಶು ಹೆರಿಗೆಯಾಗಿದ್ದು, ತಾಯಿ ಮಗುವನ್ನು ಕೈ ಚೀಲದಲ್ಲಿ ಸುತ್ತಿ, ರಸ್ತೆಗೆ ಬಿಟ್ಟು ಹೋಗಿದ್ದಾರೆ. ಘಟನೆ ಶ್ರೀರಾಮಪುರದ 2ನೇ ಕ್ರಾಸ್ ಬಳಿ, ಬೋರೆವೆಲ್ ಸಮೀಪವಾಗಿದೆ. ಶಿಶುವನ್ನು ಬಿಟ್ಟು ಹೋಗಿದ ನಂತರ, ಸ್ಥಳೀಯರು ಶುಕ್ರವಾರ ಬೆಳಿಗ್ಗೆ ಆರೋಗ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಆರೋಗ್ಯ ಇಲಾಖೆಯವರು ಸ್ಥಳಕ್ಕೆ ಬರುವ ಪೂರ್ವವೇ, ಸ್ಥಳೀಯರು ಶಿಶುವನ್ನು ರಕ್ಷಿಸಿ ಸ್ನಾನ ಮಾಡಿಸಿ, ಪ್ರಾಥಮಿಕ ಆರೈಕೆ ನೀಡಿದ್ದಾರೆ. ನಂತರ, ಮಗುವನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ, ಅಲ್ಲಿಯ ಹೆರಿಗೆ ಮತ್ತು ಮಕ್ಕಳ ವಿಭಾಗದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ಘಟನೆಯನ್ನು ತಿಳಿದು, ಶಿಶು ಅಭಿವೃದ್ದಿ ಯೋಜನಾಧಿಕಾರಿ ಗಂಗಾಭಾಯಿ ಅವರು ಮೆಗ್ಗಾನ್ ಆಸ್ಪತ್ರೆಗೆ ಭೇಟಿ ನೀಡಿ, ಅಗತ್ಯ ಮಾಹಿತಿಯನ್ನು ಪಡೆದುಕೊಂಡಿದ್ದಾರೆ. ಸ್ಥಳಕ್ಕೆ ತುಂಗಾನಗರ ಪೊಲೀಸರು ಭೇಟಿ ನೀಡಿ, ತನಿಖೆ ಮುಂದುವರೆದಿದೆ.