ಕೊಲಂಬೋ: ಶ್ರೀಲಂಕಾದ ಮಿನ್ನೇರಿಯಾ ಸಮೀಪ ನಡೆದ ಭೀಕರ ರೈಲು ಅಪಘಾತದಲ್ಲಿ ಕನಿಷ್ಠ ಆರು ಆನೆಗಳು ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ. ಶುಕ್ರವಾರ ಬೆಳಗಿನ ಜಾವ, ವನ್ಯಜೀವಿ ಸಂರಕ್ಷಿತಾರಣ್ಯದೊಳಗೆ ಹಾದುಹೋಗುವ ಹಳಿಯಲ್ಲಿ, ವೇಗವಾಗಿ ಸಾಗುತ್ತಿದ್ದ ಪ್ಯಾಸೆಂಜರ್ ರೈಲು ಆನೆಗಳ ಹಿಂಡಿಗೆ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.

ಮರಿ ಆನೆಗಳು ಸಹಿತ ಆರು ಆನೆಗಳ ದುರ್ಮರಣ

ಶ್ರೀಲಂಕಾ ರಾಜಧಾನಿ ಕೊಲಂಬೊದಿಂದ ಸುಮಾರು 200 ಕಿಲೋಮೀಟರ್ ದೂರದಲ್ಲಿರುವ ಮಿನ್ನೇರಿಯಾ ಪ್ರದೇಶದಲ್ಲಿ ಈ ಅಪಘಾತ ಸಂಭವಿಸಿದೆ. ಮೃತಪಟ್ಟ ಆರು ಆನೆಗಳಲ್ಲಿ ನಾಲ್ಕು ಮರಿ ಆನೆಗಳು ಮತ್ತು ಎರಡು ವಯಸ್ಕ ಆನೆಗಳು ಇದ್ದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೌದುಲಾ ಹಾಗೂ ವಸಗಾಮುವಾ ನಡುವೆ ಸಂಚರಿಸುವ ಈ ರೈಲು, ಅಭಯಾರಣ್ಯದೊಳಗಿಂದ ಹಾದುಹೋಗುವ ಹಳಿಯಲ್ಲಿ ಅಪಘಾತಕ್ಕೀಡಾಯಿತು.

ಪ್ರಯಾಣಿಕರಿಗೆ ಗಾಯಗಳಿಲ್ಲ, ಆದರೆ ಪರಿಸರಪ್ರೇಮಿಗಳ ಆಕ್ರೋಶ

ರೈಲು ಅಪಘಾತದ ರಭಸಕ್ಕೆ ರೈಲು ಹಳಿ ತಪ್ಪಿದರೂ, ಅದೃಷ್ಟವಶಾತ್ ಪ್ರಯಾಣಿಕರಿಗೆ ಯಾವುದೇ ಗಾಯಗಳಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ, ಈ ದಾರುಣ ಘಟನೆಯಿಂದ ಪರಿಸರ ಸಂರಕ್ಷಣಾ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಈ ಮಾರ್ಗದಲ್ಲಿ ಆನೆಗಳ ಸುರಕ್ಷತೆಗಾಗಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸುತ್ತಿವೆ.

ಈ ಪ್ರದೇಶದಲ್ಲಿ ಹಲವು ಆನೆಗಳು ನೆಲೆಸಿರುವುದರಿಂದ, ಅರಣ್ಯ ಇಲಾಖೆ ಮತ್ತು ರೈಲ್ವೆ ಇಲಾಖೆ ಜಂಟಿಯಾಗಿ ಸೂಕ್ತ ನಿರ್ಬಂಧಿತ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ ಎಂದು ವನ್ಯಜೀವಿ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Leave a Reply

Your email address will not be published. Required fields are marked *

Related News

error: Content is protected !!