ಬೆಂಗಳೂರಿನ ಯಶವಂತಪುರದ ಮತ್ತಿಕೆರೆಯ ಕ್ಲಿನಿಕ್ನಲ್ಲಿ ನ್ಯಾಚುರೋಪತಿ, ಅಕ್ಯೂಪಂಕ್ಚರ್ ಚಿಕಿತ್ಸೆ ನೀಡುತ್ತಿದ್ದ ವೈದ್ಯ ವೆಂಕಟರಮಣ, ಚಿಕಿತ್ಸೆಗೆ ಬರುತ್ತಿದ್ದ ಮಹಿಳೆಯರ ಅಂಗಾಂಗಗಳನ್ನು ವಿಡಿಯೋ ಚಿತ್ರೀಕರಿಸುತ್ತಿದ್ದ. ಅಷ್ಟೇ ಅಲ್ಲ ಚಿಕಿತ್ಸೆ ಕೊಡುವ ನೆಪದಲ್ಲಿ ಬೇಕಂತಲೇ ಖಾಸಗಿ ಅಂಗಗಳಿಗೂ ಇಂಜೆಕ್ಷನ್ ಕೊಡಲು ಮುಂದಾಗುತ್ತಿದ್ದ ಎಂದು ಪೊಲೀಸ್ ತನಿಖೆ ವೇಳೆ ತಿಳಿದುಬಂದಿದೆ.
ಇತ್ತೀಚಿಗೆ ಯುವತಿಯೊಬ್ಬರು ಕಾಲು ನೋವಿಗೆ ಚಿಕಿತ್ಸೆ ಪಡೆಯಲು ಕ್ಲಿನಿಕ್ಗೆ ತೆರಳಿದ್ದರು. ಆ ವೇಳೆ ಖಾಸಗಿ ಅಂಗಗಳಿಗೂ ಇಂಜೆಕ್ಷನ್ ನೀಡಲು ವೈದ್ಯ ಮುಂದಾಗಿದ್ದ. ಇದಾದ ಕೆಲ ದಿನಗಳ ಬಳಿಕ ಯುವತಿಯ ಮೊಬೈಲ್ಗೆ ತಾನು ಚಿಕಿತ್ಸೆ ಪಡೆದ ವಿಡಿಯೋ ಬಂದಿತ್ತು. ಈ ಬಗ್ಗೆ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಯುವತಿಯ ಕಡೆಯವರು ದೂರು ದಾಖಲಿಸಿದ್ದರು. ಪ್ರಕರಣ ದಾಖಲಾಗಿರುವುದು ತಿಳಿಯುತ್ತಿದ್ದಂತೆಯೇ ವೈದ್ಯ ಆಂಧ್ರಕ್ಕೆ ಪರಾರಿಯಾಗಿದ್ದ.
ಆಂಧ್ರದ ಗುತ್ತಿ ಬಳಿ ವೈದ್ಯ ವೆಂಕಟರಮಣ ಸಿಕ್ಕಿಬಿದ್ದಿದ್ದು, ತನಿಖೆ ವೇಳೆ ವೈದ್ಯನ ಅಸಲಿ ಮುಖ ಬಯಲಾಗಿದೆ. ಅಲ್ಲದೇ ಪೊಲೀಸರು ಆರೋಪಿಯ ಮೊಬೈಲ್ ಜಪ್ತಿ ಮಾಡಿ ಪರಿಶೀಲನೆ ನಡೆಸಿದಾಗ ವೈದ್ಯನ ಕೈಚಳಕದ ವಿಡಿಯೋಗಳು ಪತ್ತೆಯಾಗಿವೆ.
ಬೆಂಗಳೂರಿನ ಜಾಲಹಳ್ಳಿಯಲ್ಲಿ ದ್ವಿತೀಯ ಪಿಯುಸಿ ಓದಿದ್ದ ವೈದ್ಯ ವೆಂಕಟರಮಣ, ಮಾರತ್ತಹಳ್ಳಿಯ ಖಾಸಗಿ ಕಂಪನಿಯೊಂದರಲ್ಲಿ ಮ್ಯಾನೇಜರ್ ಆಗಿದ್ದ. 10 ವರ್ಷ ಕಮರ್ಷಿಯಲ್ ಮ್ಯಾನೇಜರ್ ಆಗಿದ್ದ ವೆಂಕಟರಮಣ, ನಂತರ ಜಯನಗರದ ಖಾಸಗಿ ಕಾಲೇಜಿನಲ್ಲಿ 2 ವರ್ಷ ತರಬೇತಿ ಪಡೆದಿದ್ದ ವೆಂಕಟರಮಣ, 3-4 ವರ್ಷಗಳಿಂದ ಮನೆ ಬಳಿ ಅಕ್ಯೂಪಂಕ್ಚರ್ ಕ್ಲಿನಿಕ್ ತೆರೆದಿದ್ದ. ಬಳಿಕ ಕ್ಲಿನಿಕ್ಗೆ ಬರುವ ಮಹಿಳೆಯರ ಜೊತೆ ಅನುಚಿತವಾಗಿ ವರ್ತಿಸುತ್ತಿದ್ದ. ಮೊಬೈಲ್ನಲ್ಲಿ ರಹಸ್ಯವಾಗಿ ವಿಡಿಯೋ ಚಿತ್ರೀಕರಿಸುತ್ತಿದ್ದ ವಿಕೃತಿ ಮೆರೆಯುತ್ತಿದ್ದ. ವೆಂಕಟರಮಣನನ್ನು ಬಂಧಿಸಿ ವೈದ್ಯನ ಮೊಬೈಲ್ ಜಪ್ತಿ ಮಾಡಿದಾಗ ಬಹಳಷ್ಟು ವಿಡಿಯೋ ಇರುವುದು ಕಂಡುಬಂದಿವೆ.
ವೈದ್ಯನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.