
ಯಾದಗಿರಿ: ಯುವಕನೊಬ್ಬ ವಿಧವೆಯೊಂದನ್ನು ಮದುವೆಯಾಗುವುದಾಗಿ ನಂಬಿಸಿ, ಪ್ರೀತಿಯ ನಾಟಕವಾಡಿ, ದೈಹಿಕ ಸಂಬಂಧ ಬೆಳೆಸಿ, ಆಕೆಯಿಂದ ಲಕ್ಷಾಂತರ ರೂಪಾಯಿ ಹಣ ವಂಚಿಸಿದ ಘಟನೆ ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕಿನ ಬಸವಂತಪುರ ಗ್ರಾಮದಲ್ಲಿ ನಡೆದಿದೆ.
ವಿಧವೆಯ ಸಂಕಷ್ಟಕ್ಕೆ ನಕಲಿ ಸಹಾನುಭೂತಿ
ಬಸವಂತಪುರ ಗ್ರಾಮದ ಮಹಿಳೆ ಹತ್ತು ವರ್ಷಗಳ ಹಿಂದೆ ತೆಲಂಗಾಣದ ನಾರಾಯಣಪೇಟೆ ಜಿಲ್ಲೆಯ ಮಕ್ತಲ್ ತಾಲ್ಲೂಕಿನ ಅಮೀನಾಪುರ ಗ್ರಾಮದ ಬಸನಗೌಡ ಎಂಬುವರಿಗೆ ವಿವಾಹವಾದರು. ಮದುವೆಯೊಂದೇ ವರ್ಷದಲ್ಲಿ ದಂಪತಿಗೆ ಗಂಡು ಮಗು ಜನಿಸಿತು. ಸಂಸಾರ ಸುಖವಾಗಿ ಸಾಗುತ್ತಿರುವಾಗಲೇ ಗಂಡ ಪಾರ್ಶ್ವವಾಯುವಿನಿಂದ ಮೃತಪಟ್ಟಿದ್ದು, ಇದರಿಂದಾಗಿ ಆಕೆ ಆರ್ಥಿಕ ಮತ್ತು ಮಾನಸಿಕ ಸಂಕಷ್ಟಕ್ಕೆ ಒಳಗಾದರು.
ಗಂಡನ ಅಗಲಿಕೆಯಿಂದ ತವರು ಮನೆಗೆ ಮರಳಿದ ಮಹಿಳೆ, ತಮ್ಮ ಬದುಕಿನ ಸಮಸ್ಯೆಗಳಿಗೆ ಪರಿಹಾರಕ್ಕಾಗಿ ಅಬ್ಬೆತುಮಕೂರಿನ ಸ್ವಾಮೀಜಿಯವರನ್ನು ಭೇಟಿ ಮಾಡಿದರು. ಸ್ವಾಮೀಜಿ ಆಕೆಗೆ ಸಾಂತ್ವನ ಹೇಳಿ ದೇವರ ಆಶೀರ್ವಾದ ಕೋರಿದರು. ಈ ಸಂದರ್ಭ ಅಬ್ಬೆತುಮಕೂರಿನ ಮಠದಲ್ಲಿ ಮಾಳಪ್ಪ ಹತ್ತಿಕುಣಿ ಎಂಬಾತನ ಪರಿಚಯವಾಯಿತು.
ನಂಬಿಕೆ, ಪ್ರೇಮದ ನಾಟಕ ಮತ್ತು ಹಣ ವಂಚನೆ
ಮಾಳಪ್ಪ, ತನ್ನ ಸಿಹಿ ಮಾತುಗಳ ಮೂಲಕ ವಿಧವೆಯ ನಂಬಿಕೆ ಗೆಲ್ಲಲು ಪ್ರಾರಂಭಿಸಿದ. ‘‘ನೀನು ಏಕಾಕಿಯಾಗಿರುವೆ, ನಿನಗೆ ಗಂಡನ ಸ್ಥಾನ ನಾನು ಕೊಡುತ್ತೇನೆ. ನಾವಿಬ್ಬರೂ ಸಂತೋಷದಿಂದ ಸಂಸಾರ ಮಾಡೋಣ’’ ಎಂಬಂತೆ ಭರವಸೆ ನೀಡಿ ಪ್ರೀತಿಯ ನಾಟಕವಾಡಿದ. ಆತನ ಮಾತುಗಳಿಗೆ ಮರುಳಾದ ಮಹಿಳೆ, ತನ್ನ ತೆಲಂಗಾಣದಲ್ಲಿದ್ದ 4.5 ಎಕರೆ ಜಮೀನನ್ನು ಮಾರಾಟ ಮಾಡಿ, ಅಂದಾಜು 80 ಲಕ್ಷ ರೂ. ಹಣ ಪಡೆದರು.
ಆ ಹಣವನ್ನು ಮಾಳಪ್ಪ ಸ್ವತಃ ತೆಗೆದುಕೊಂಡು, ಜೊತೆಗೆ ಮಹಿಳೆಯ ಹಳೆಯ ಆಸ್ತಿ, ಬಂಗಾರಗಳನ್ನು ಸಹ ಮಾರಿಸಿ ಹಣವನ್ನೂ ಲೂಟಿ ಮಾಡಿದ್ದಾನೆ. ಈ ಎಲ್ಲ ವಂಚನೆಯ ನಂತರ ಮಾಳಪ್ಪ ಹೆಜ್ಜೆಹಾಕಿದ್ದು, ಮಹಿಳೆಯನ್ನು ನಿರಾಶೆಗೊಳಿಸಿದ.
ಪೋಲಿಸರಿಗೆ ದೂರು – ನ್ಯಾಯಕ್ಕಾಗಿ ಧರಣಿ
ನ್ಯಾಯಕ್ಕಾಗಿ ಮಹಿಳೆ ಶಹಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಲಾಗಿದೆ. ಆದರೆ ಇದುವರೆಗೆ ಆರೋಪಿಯ ಬಂಧನವಾಗಿಲ್ಲ. ನ್ಯಾಯ ಪಡೆಯದೇ ಹಿಂತಿರುಗುವುದಿಲ್ಲವೆಂದು ಮಹಿಳೆ ಯಾದಗಿರಿ ಎಸ್‌ಪಿ ಕಚೇರಿ ಎದುರು ಧರಣಿ ನಡೆಸಿದ್ದಾಳೆ. ‘‘ನ್ಯಾಯ ಸಿಗದಿದ್ದರೆ ಡಿಸೇಲ್ ಸುರಿದು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ’’ ಎಂದು ಎಚ್ಚರಿಸಿದ್ದಾಳೆ.
ಈ ಪ್ರಕರಣ ಸಂಬಂಧ ಪೊಲೀಸರು ಮುಂದಿನ ಕ್ರಮ ಕೈಗೊಳ್ಳಬೇಕಾಗಿದೆ. ವಂಚಿತ ಮಹಿಳೆಗೆ ನ್ಯಾಯ ದೊರೆಯಲು ಸ್ಥಳೀಯರು ಸಹ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ.